ಕರ್ನಾಟಕ

karnataka

ETV Bharat / state

ಸದನದ ಯಾವ ಆಸನದಲ್ಲಿ ಆಸೀನರಾಗುತ್ತಾರೆ ಬಿಎಸ್​ವೈ, ಶೆಟ್ಟರ್? - ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭ

ಶಾಸಕರಿಗೆ ಕೊಡಮಾಡುವ ಆಸನಗಳಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಕೋರಿಕೆ ಮೇರೆಗೆ ಅವರ ಅಪೇಕ್ಷಿತ ಆಸನಗಳನ್ನು ವಿಧಾನಸಭೆ ಅಧ್ಯಕ್ಷರು ಹಂಚಿಕೆ ಮಾಡುವ ಅವಕಾಶವಿದೆ. ಆಡಳಿತ ಪಕ್ಷದ ಕಡೆಯಿಂದ ಬರುವ ಕೋರಿಕೆಯನ್ನು ಪರಿಗಣಿಸಿ ಸ್ಪೀಕರ್ ಯಡಿಯೂರಪ್ಪ ಮತ್ತು ಶೆಟ್ಟರ್‌ಗೆ ಆಸನಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ..

ಸದನದ ಯಾವ ಆಸನದಲ್ಲಿ ಆಸೀನರಾಗುತ್ತಾರೆ ಬಿಎಸ್​ವೈ, ಶೆಟ್ಟರ್
ಸದನದ ಯಾವ ಆಸನದಲ್ಲಿ ಆಸೀನರಾಗುತ್ತಾರೆ ಬಿಎಸ್​ವೈ, ಶೆಟ್ಟರ್

By

Published : Aug 21, 2021, 5:17 PM IST

Updated : Aug 21, 2021, 8:24 PM IST

ಬೆಂಗಳೂರು :ಸೆಪ್ಟೆಂಬರ್ 13ರಿಂದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳುತ್ತಿದೆ. ಆಡಳಿತಾರೂಢ ಪಕ್ಷದ ಕಡೆ ಇಬ್ಬರು ಮಾಜಿ ಮುಖ್ಯಮಂತ್ರಿಗಳಿದ್ದು, ಸದನದಲ್ಲಿ ಅವರಿಗೆ ಯಾವ ಸಾಲಿನ ಯಾವ ಆಸನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ನಡೆಯುತ್ತಿರುವ ಮೊದಲ ಅಧಿವೇಶನದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ನಿಕಟಪೂರ್ಣ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಯಾವ ಆಸನದಲ್ಲಿ ಆಸೀನರಾಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

ಕಳೆದ ಅಧಿವೇಶನದ ವೇಳೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಆಡಳಿತ ಪಕ್ಷದ ಸಾಲಿನ ಮೊದಲ ಆಸನದಲ್ಲಿ ಆಸೀನರಾಗಿದ್ದರು. ಮಾಜಿ ಮುಖ್ಯಮಂತ್ರಿ ಆಗಿದ್ದರೂ ಯಡಿಯೂರಪ್ಪ ಸಂಪುಟದ ಭಾಗವಾಗಿದ್ದ ಹಿರಿಯ ಸಚಿವ ಜಗದೀಶ್ ಶೆಟ್ಟರ್ ಆಡಳಿತ ಪಕ್ಷದ ಕಡೆಯ ಮೊದಲ ಸಾಲಿನಲ್ಲಿಯೇ ಆಸೀನರಾಗಿದ್ದರು.

ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಗದೀಶ್ ಶೆಟ್ಟರ್ ಕೂಡ ಹೊಸ ಸರ್ಕಾರದ ಸಂಪುಟದಿಂದ ಹೊರಗುಳಿದಿದ್ದಾರೆ. ಹಾಗಾಗಿ, ಮೊದಲ ಆಸನದಲ್ಲಿದ್ದ ಯಡಿಯೂರಪ್ಪ ಮತ್ತು ಮೊದಲ ಸಾಲಿನಲ್ಲಿದ್ದ ಜಗದೀಶ್ ಶೆಟ್ಟರ್‌ಗೆ ಈಗ ಹೊಸದಾಗಿ ಆಸನಗಳನ್ನು ಹಂಚಿಕೆ ಮಾಡಬೇಕಿದೆ‌.

ಆಸನಗಳ ಹಂಚಿಕೆ ಹೇಗೆ?:ಆಡಳಿತ ಪಕ್ಷದ ಮೊದಲ ಸಾಲಿನ ಮೊದಲ ಆಸನ ಮುಖ್ಯಮಂತ್ರಿಗಳಿಗೆ ಮೀಸಲಾಗಿದೆ. ಹಿರಿಯ ಸಚಿವರಿಗೆ ಮೊದಲ ಸಾಲಿನ ಆಸನಗಳು, ಹಿರಿತನದ ಆಧಾರದಲ್ಲಿ ಇತರ ಸಚಿವರಿಗೆ ಎರಡನೇ ಸಾಲಿನ ಆಸನಗಳನ್ನು ವಿಧಾನಸಭೆ ಅಧ್ಯಕ್ಷರು ಹಂಚಿಕೆ ಮಾಡಲಿದ್ದಾರೆ.

ಇನ್ನುಳಿದಂತೆ ಆಡಳಿತ ಪಕ್ಷದ ಶಾಸಕರಿಗೆ ಸಚಿವರಿಗೆ ಹಂಚಿಕೆ ಮಾಡಿ ನಂತರ ಉಳಿಯುವ ಆಸನಗಳನ್ನು ಎಷ್ಟು ಬಾರಿ ಶಾಸಕರಾಗಿದ್ದಾರೆ ಎನ್ನುವ ಹಿರಿತನದ ಆಧಾರದಲ್ಲಿ ಸ್ಪೀಕರ್ ಆದವರು ಹಂಚಿಕೆ ಮಾಡುತ್ತಾರೆ. ಒಂದು ವೇಳೆ ಸಮಾನ ಜೇಷ್ಠತೆ ಹೊಂದಿದ‌ ಒಂದಕ್ಕಿಂತ ಹೆಚ್ಚು ಶಾಸಕರಿದ್ದಲ್ಲಿ ಅವರ ಹೆಸರಿನ ವರ್ಣಮಾಲೆ ಆಧಾರದಲ್ಲಿ ಸ್ಥಾನಗಳ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

ಸದ್ಯ ಮಾಜಿ ಸಿಎಂ ಯಡಿಯೂರಪ್ಪ ಎಂಟು ಬಾರಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕರಾಗಿದ್ದು, ಜೇಷ್ಠತೆಯ ಪ್ರಕಾರ ಆಸನ ಹಂಚಿಕೆ ಮಾಡಿದಲ್ಲಿ ಸಚಿವರ ನಂತರದ ಮೊದಲ ಸ್ಥಾನ ಯಡಿಯೂರಪ್ಪ ಅವರಿಗೆ, ಮೂರು ಇಲ್ಲವೇ ನಾಲ್ಕನೆಯ ಸಾಲಿನಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಆಸನ ಹಂಚಿಕೆ ಮಾಡಬೇಕಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮೈಸೂರು ರೋಡ್ ಟು ಕೆಂಗೇರಿ ಮೆಟ್ರೋ ಮಾರ್ಗ ಆ.29ರಿಂದ ಪ್ರಯಾಣಿಕರಿಗೆ ಮುಕ್ತ

ಶಾಸಕರಿಗೆ ಕೊಡಮಾಡುವ ಆಸನಗಳಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಕೋರಿಕೆ ಮೇರೆಗೆ ಅವರ ಅಪೇಕ್ಷಿತ ಆಸನಗಳನ್ನು ವಿಧಾನಸಭೆ ಅಧ್ಯಕ್ಷರು ಹಂಚಿಕೆ ಮಾಡುವ ಅವಕಾಶವಿದೆ. ಆಡಳಿತ ಪಕ್ಷದ ಕಡೆಯಿಂದ ಬರುವ ಕೋರಿಕೆಯನ್ನು ಪರಿಗಣಿಸಿ ಸ್ಪೀಕರ್ ಯಡಿಯೂರಪ್ಪ ಮತ್ತು ಶೆಟ್ಟರ್‌ಗೆ ಆಸನಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಎಸ್​​ವೈಗೆ ದ್ವಾರದ ಪಕ್ಕದ ಆಸನ :ಯಡಿಯೂರಪ್ಪ 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಕಲಾಪದಲ್ಲಿ ಭಾಗಿಯಾಗಿದ್ದ ನಿದರ್ಶನಗಳಿವೆ. ಕಡೆಯ ಸಾಲಿನಲ್ಲಿ ಕುಳಿತು ಸದಸ್ಯರ ಭಾಷಣ ಕೇಳುತ್ತಿದ್ದರು. ಪ್ರತಿಪಕ್ಷಗಳು ಕಾಲೆಳೆದರೂ ನಗುನಗುತ್ತಲೇ ಕಡೆಯ ಸಾಲಿನಲ್ಲಿ ಕುಳಿತಿರುತ್ತಿದ್ದರು.

ಇದೀಗ ಕೂಡ ಯಡಿಯೂರಪ್ಪ ಕಡೆಯ ಸಾಲಿನ ಆಸನದ ಅಪೇಕ್ಷೆ ವ್ಯಕ್ತಪಡಿಸುವ ಸಾಧ್ಯತೆ ಇದೆ. ಸದನದ ಪ್ರವೇಶ ದ್ವಾರದ ಪಕ್ಕದಲ್ಲೇ ಕಡೆಯ ಸಾಲಿನ ಮೊದಲ ಆಸನದಲ್ಲೇ ಕುಳಿತುಕೊಳ್ಳಲು ಇಚ್ಚಿಸಬಹುದು ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪಕ್ಕದ ಆಸನದಲ್ಲೇ ಜಗದೀಶ್ ಶೆಟ್ಟರ್ ಕೂಡ ಆಸೀನರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯ ಸದನದಲ್ಲಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರ ಪರವಾಗಿ ಅಪೇಕ್ಷಿತ ಆಸನಕ್ಕಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆಡಳಿತ ಪಕ್ಷದಿಂದ ಯಾವುದೇ ಕೋರಿಕೆ ಸಲ್ಲಿಕೆಯಾದ ಮಾಹಿತಿ ಲಭ್ಯವಾಗಿಲ್ಲ. ಕಲಾಪ ಆರಂಭಕ್ಕೆ ಇನ್ನು ಸಮಯಾವಕಾಶ ಇರುವುದರಿಂದ ಸದ್ಯದಲ್ಲೇ ಕೋರಿಕೆ ಹೋಗಬಹುದು ಎನ್ನಲಾಗಿದೆ.

ಯಡಿಯೂರಪ್ಪ ಕುಟುಂಬ ಸದಸ್ಯರೊಂದಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದು, ಅವರು ಬೆಂಗಳೂರಿಗೆ ಮರಳಿದ ನಂತರ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗುವ ಬಗ್ಗೆ ಮತ್ತೆ ಯಾವ ಆಸನಕ್ಕೆ ಕೋರಿಕೆ ಸಲ್ಲಿಸಬೇಕು ಎನ್ನುವ ಬಗ್ಗೆ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರ ನಿರ್ಧಾರವನ್ನೇ ಶೆಟ್ಟರ್ ಅನುಸರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Last Updated : Aug 21, 2021, 8:24 PM IST

For All Latest Updates

TAGGED:

ABOUT THE AUTHOR

...view details