ಬೆಂಗಳೂರು: ಮುಂಬರುವ ಚುನಾವಣೆಗೆ ಹಲವು ಅಚ್ಚರಿಗಳೊಂದಿಗೆ ಬಿಜೆಪಿ ಹೈಕಮಾಂಡ್ ತನ್ನ ಹುರಿಯಾಳುಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಮುಖಗಳೊಂದಿಗೆ ಒಟ್ಟು 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೂ 35 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ.
ಗುಜರಾತ್ ಮಾದರಿಯನ್ನೇ ಕರ್ನಾಟಕದಲ್ಲೂ ಅನುಸರಿಸಿರುವ ಬಿಜೆಪಿ ಹೈ ಕಮಾಂಡ್ 52 ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಿದೆ. ಜೊತೆಗೆ 8 ಮಹಿಳೆಯರಿಗೆ ಟಿಕೆಟ್ ನೀಡಿದೆ. ಕೆಲ ಹಾಲಿ ಶಾಸಕರು, ಹಿರಿಯರನ್ನು ಕೈ ಬಿಟ್ಟಿರುವ ಬಿಜೆಪಿ ಹೈ ಕಮಾಂಡ್ ತನ್ನದೇ ಆದ ಚುನಾವಣಾ ಕಾರ್ಯತಂತ್ರ ರೂಪಿಸಿದೆ. ಬಿಜೆಪಿ ಇನ್ನೂ 35 ಕ್ಷೇತ್ರಗಳಿಗೆ ಬಿಜೆಪಿ ಹೈಕಮಾಂಡ್ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಅದರಲ್ಲೂ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರನ್ನು ಘೋಷಿಸದೇ ಇರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರು 3 ಕ್ಷೇತ್ರಗಳ ಹೆಸರು ಬಾಕಿ:ಅಚ್ಚರಿ ಎಂಬಂತೆ ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ ಬಿಜೆಪಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸದೇ ಬಾಕಿ ಉಳಿಸಿಕೊಂಡಿದೆ. ಮುಖ್ಯವಾಗಿ ಅರವಿಂದ ಲಿಂಬಾವಳಿ ಶಾಸಕರಾಗಿರುವ ಮಹದೇವಪುರ, ಹೆಬ್ಬಾಳ ಹಾಗೂ ವಿ.ಸೋಮಣ್ಣ ಶಾಸಕರಾಗಿರುವ ಗೋವಿಂದರಾಜನಗರ ಕ್ಷೇತ್ರದ ಹೆಸರನ್ನು ಘೋಷಿಸಿಲ್ಲ. ಮಹದೇವಪುರ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸದೇ ಇರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಅರವಿಂದ ಲಿಂಬಾವಳಿ ಹಾಲಿ ಶಾಸಕರ ಕ್ಷೇತ್ರಕ್ಕೆ ಹೆಸರು ಘೋಷಿಸದ ಕಾರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇತ್ತ ವಿ.ಸೋಮಣ್ಣ ಶಾಸಕರಾಗಿರುವ ಗೋವಿಂದರಾಜನಗರ ಕ್ಷೇತ್ರದ ಸಸ್ಪೆನ್ಸ್ ಉಳಿದುಕೊಂಡಿದೆ. ವಿ ಸೋಮಣ್ಣಗೆ ವರುಣ ಹಾಗೂ ಚಾಮರಾಜನಗರ ಕ್ಷೇತ್ರಗಳಿಗೆ ಟಿಕೆಟ್ ನೀಡಿದ್ದು, ಗೋವಿಂದರಾಜನಗರ ಯಾರಿಗೆ ಎಂಬ ಕುತೂಹಲ ಮೂಡಿದೆ. ವಿ. ಸೋಮಣ್ಣ ಮಗನಿಗೆ ಕ್ಷೇತ್ರದ ಟಿಕೆಟ್ ಕೊಡ್ತಾರ ಅಥವಾ ವಿ. ಸೋಮಣ್ಣ ಶಿಷ್ಯ ಉಮೇಶ್ ಶೆಟ್ಟಿಗೆ ಟಿಕೆಟ್ ಕೊಡ್ತಾರಾ ಎಂಬ ಪ್ರಶ್ನೆ ಮೂಡಿದೆ.
ಹುಬ್ಬಳಿ ಧಾರವಾಡ ಕೇಂದ್ರ ಸಸ್ಪೆನ್ಸ್: ಹಿರಿಯ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದ ಟಿಕೆಟ್ ಘೋಷಿಸದೇ ಹಾಗೇ ಬಾಕಿ ಉಳಿಸಿಕೊಳ್ಳಲಾಗಿದೆ. ಜಗದೀಶ್ ಶೆಟ್ಟರ್ ತಮಗೆ ಈ ಬಾರಿ ಟಿಕೆಟ್ ನೀಡದಿರುವ ಬಗ್ಗೆ ಹೈಕಮಾಂಡ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಾರಿ ಚುನಾವಣೆಗೆ ನಿಲ್ಲುವುದಾಗಿ ತಿಳಿಸಿರುವ ಅವರು, ಹೈಕಮಾಂಡ್ ಬುಲಾವ್ ಮೇರೆಗೆ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಈ ವೇಳೆ ತಮ್ಮ ಕ್ಷೇತ್ರ ಹಾಗೂ ಟಿಕೆಟ್ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಶಿವಮೊಗ್ಗ ಕ್ಷೇತ್ರ ಟಿಕೆಟ್ ಘೋಷಣೆ ಇಲ್ಲ:ಇತ್ತ ಕೆ ಎಸ್ ಈಶ್ವರಪ್ಪ ಪ್ರತಿನಿಧಿಸುವ ಕ್ಷೇತ್ರ ಶಿವಮೊಗ್ಗ ಟಿಕೆಟ್ ಘೋಷಣೆ ಮಾಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ತಾವು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಕೆ ಎಸ್ ಈಶ್ವರಪ್ಪ ಕ್ಷೇತ್ರದ ಟಿಕೆಟ್ನ್ನು ತಮ್ಮ ಮಗನಿಗೆ ನೀಡುವ ಆಶಾಭಾವನೆಯಲ್ಲಿದ್ದಾರೆ. ಇತ್ತ ಬಿಜೆಪಿಯಿಂದ ಆಯನೂರು ಮಂಜುನಾಥ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರ ಬಾಕಿ ಉಳಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.