ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಬೆಂಗಳೂರು:ಸರ್ಕಾರ ತನ್ನ ಇಡೀ ಮೆದುಳನ್ನ ನಗರ ನಕ್ಸಲ್ಗೆ ಒಪ್ಪಿಸಿದರೆ ನಾವು ಸುಮ್ಮನೆ ಇರಲ್ಲ, ಈ ಚುನಾವಣೆ ಲೈಫ್ ಟೈಮ್ ಅಲ್ಲ. ಮತ್ತೆ ಮತ್ತೆ ಚುನಾವಣೆ ಬರುತ್ತಾ ಇರುತ್ತದೆ ಎನ್ನುವುದು ನೆನಪಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಂತೆ ಅರ್ಬನ್ ನಕ್ಸಲರು ಬಿಲದಿಂದ ಹೊರ ಬಂದಿದ್ದಾರೆ. ಈಗ ಮತ್ತೆ ಚಿಕ್ಕಮಗಳೂರು ಭಾಗದಲ್ಲಿ ಇನ್ನು ಕೆಲವೆಡೆ ನಕ್ಸಲ್ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಛತ್ತೀಸ್ಗಢದಲ್ಲಿ ಚಟುವಟಿಕೆ ಆದಂತೆ ಇಲ್ಲಿಯೂ ಆಗಬಹುದು. ನಮ್ಮ ಸರ್ಕಾರ ಇದ್ದಾಗ ಬಾಲ ಮುದುರಿಕೊಂಡಿದ್ದರು. ಈಗ ಅವರು ಹೊರ ಬಂದಿದ್ದಾರೆ, ಅವರಿಗೆ ಬುಲೆಟ್ ಮೇಲೆ ನಂಬಿಕೆ ಬ್ಯಾಲೆಟ್ ಮೇಲೆ ಅಲ್ಲ ಎಂದರು.
ಈಗ ಪಠ್ಯ ಬದಲಾವಣೆ ಮಾಡಿ ಎಂದು ಮುಂದೆ ಬಂದಿದ್ದಾರೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಹೆಡಗೆವಾರ್ ಅವರ ದೇಶ ಪ್ರೇಮ, ಸಂಘದ ದೇಶ ಪ್ರೇಮ ಯಾರು ಪ್ರಶ್ನೆ ಮಾಡೋಕೆ ಆಗಲ್ಲ, ಹೆಗಡೆವಾರ್ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದವರು, ಅವರ ಪಠ್ಯ ಕೈಬಿಡಲು ಹೊರಟಿದ್ದಾರೆ, ನಾವು ಕಾದು ನೋಡುತ್ತೇವೆ ನಮಗೂ ಏನು ಮಾಡಬೇಕು ಎನ್ನುವುದು ಗೊತ್ತಿದೆ.
ಎಲ್ಲರಿಗೂ ಉಚಿತ ಯೋಜನೆ ನೀಡಬೇಕು: ಚುನಾವಣೆ ವೇಳೆ ಐದು ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿ ಉಚಿತ ಯೋಜನೆ ಎಲ್ಲರಿಗೂ ನೀಡುತ್ತೇವೆ ಎಂದಿದ್ದರು. ಈಗ ಅವರಿಗೆ ಇಲ್ಲ ಇವರಿಗೆ ಇಲ್ಲ ಅಂದರೆ ಹೇಗೆ? ಖಂಡಿತ ಉಚಿತ, ನಿಶ್ಚಿತ ಎಂದೆಲ್ಲ ಪ್ರಾಸಬದ್ಧವಾಗಿ ಮಾತಾಡಿದ್ದು ಯಾರು ?, ಈಗ ಎಲ್ಲರಿಗೂ ಉಚಿತ ಯೋಜನೆ ನೀಡಬೇಕು ಯಾವುದೇ ಷರತ್ತು ಹಾಕಬಾರದು ಎಂದು ಸಿಟಿ ರವಿ ಆಗ್ರಹಿಸಿದರು.
ಭಾರತ ಗೆಲ್ಲಲು ಕೇಂದ್ರದಲ್ಲಿ ಬಿಜೆಪಿ ಗೆಲ್ಲಬೇಕು: ನಾನು ಕಳೆದ ಬಾರಿಗಿಂತ 9 ಸಾವಿರ ಮತ ಹೆಚ್ಚು ತಗೊಂಡಿದ್ದೇನೆ, ಸೋತಿದ್ದಕ್ಕೆ ಯಾರನ್ನೂ ದೂರಲ್ಲ. ನಾನು ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ, ರಾಷ್ಟ್ರಮಟ್ಟದದಲ್ಲಿ ಪಕ್ಷ ಅವಕಾಶ ನೀಡಿದೆ. ರಾಜ್ಯಾಧ್ಯಕ್ಷ ಹುದ್ದೆ ಇನ್ನೊಂದು ಮತ್ತೊಂದಕ್ಕೆ ನಾನು ಬೇಡಿಕೆ ಇಡುವವನು ಅಲ್ಲ, ಅದು ನನ್ನ ಮನಸ್ಸಿಗೆ ಒಪ್ಪಲ್ಲ, ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಬೇಕು ಭಾರತ ಗೆಲ್ಲಲು ಕೇಂದ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂದರು.
ಭಾರತಕ್ಕೆ ಬಿಜೆಪಿ ಅಗತ್ಯ: ಕೆಲವರು 2028ಕ್ಕೆ ಭಾರತವನ್ನು ಅಭಿವೃದ್ಧಿ ರಾಷ್ಟ್ರ ಮಾಡಬೇಕು ಎನ್ನುವ ಗುರಿ ಮೋದಿ ಇಟ್ಟುಕೊಂಡಿದ್ದರೆ 2047ಕ್ಕೆ ಕೆಲ ಜಿಹಾದಿ ಮನಸ್ಥಿತಿಯವರು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಗುರಿ ಇಟ್ಟಿದ್ದಾರೆ. ಇಂತಹ ಸಮಯದಲ್ಲಿ ಭಾರತಕ್ಕೆ ಬಿಜೆಪಿ ಅಗತ್ಯ. ರಾಷ್ಟ್ರದ ಹಿತಕ್ಕೆ ಬಿಜೆಪಿ ಮತ್ತೆ ಗೆಲ್ಲಬೇಕು, ಆ ಕಡೆಗಷ್ಟೇ ನನ್ನ ಗಮನ, ಪಕ್ಷ ವಹಿಸಿವ ಜವಾಬ್ದಾರಿ ನಿರ್ವಹಣೆ, ಸೂಚನೆ ಪಾಲನೆ ಮಾಡುವುದಷ್ಟೇ ನನ್ನ ಕೆಲಸ ಅದನ್ನು ಅಚ್ಚುಕಟ್ಟಾದ ಮಾಡುತ್ತೇನೆ ಎಂದರು.
ಈಗ ಹನಿಮೂನ್ ಪಿರಿಯಡ್: ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಡುವವರು, ಒತ್ತಡಕ್ಕೆ ಜಗ್ಗುವವರು ಅಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಯಾವ ಮಾತುಕತೆ ಆಗಿದೆ ಗೊತ್ತಿಲ್ಲ. ಈಗ ಹನಿಮೂನ್ ಪಿರಿಯಡ್, ನಾವು ಯಾಕೆ ಈಗಲೇ ಮಾತನಾಡೋಣ ಹನಿಮೂನ್ ಪಿರಿಯಡ್ ಆದ್ದರಿಂದ ಸ್ವಲ್ಪ ಪ್ರೀತಿಯಿಂದ ಒಬ್ಬರಿಗೊಬ್ಬರು ತಿವಿದಿರಬಹುದು ನೋಡೊಣ ಸಂಸಾರ ಆರಂಭ ಆಗಲಿ. ಗರತಿ ಯಾರು ಇನ್ನೊಂದು ಯಾರು ಗೊತ್ತಾಗತ್ತದೆ ಎಂದು ಲೇವಡಿ ಮಾಡಿದರು.
ವಿಧಾನಸಭೆ ವಿಪಕ್ಷ ನಾಯಕ ಸ್ಥಾನ ವಿಚಾರವನ್ನ ಪಕ್ಷದ ಶಾಸಕಾಂಗ ಸಭೆ ಕರೆದು ಚರ್ಚೆ ಮಾಡಲಾಗುತ್ತದೆ. ಪ್ರತಿಯೊಬ್ಬರನ್ನು ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಶೀಘ್ರವೇ ವಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಿಜೆಪಿಗೆ ಸೋಲು ಹೊಸದೇನಲ್ಲ. ಆತ್ಮಾವಲೋಕನ ಮಾಡಿ ಮತ್ತೆ ಪುಟಿದೇಳುತ್ತೇವೆ ಎಂದು ಸಿಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರಧಾನಿಗೆ 15 ರೂಪಾಯಿ ಮನಿಯಾರ್ಡರ್ ಕಳುಹಿಸಿ, ಹಲವು ಪ್ರಶ್ನೆ ಕೇಳಿದ ಯುವಕಾಂಗ್ರೆಸ್