ಬೆಂಗಳೂರು :ದತ್ತಪೀಠದ ವಿಚಾರದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನಗಳ ಹಿಂದೆ ನ್ಯಾಯಾಲಯ ತೀರ್ಪಿನ ಆದೇಶದಂತೆ ಸಂಪುಟ ಉಪಸಮಿತಿ ತೆಗೆದುಕೊಂಡ ನಿರ್ಣಯದ ಶಿಫಾರಸು ಅಂಗೀಕರಿಸಿ ಸರ್ಕಾರವು ಆಡಳಿತ ಮಂಡಳಿ ರಚಿಸಿದೆ.
ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕಾತಿಗೆ ಇದ್ದ ಅಡೆತಡೆ ಈಗ ನಿವಾರಣೆಯಾಗಿದ್ದು, ಶೀಘ್ರ ಅರ್ಚಕರ ನೇಮಕ ನಡೆಯಲಿದೆ. ಈ ಬಾರಿ ದತ್ತ ಜಯಂತಿ 4-5 ದಶಕದ ಹೋರಾಟ ಈಡೇರಿದ ಸಂತೃಪ್ತಿಯ ಜಯಂತಿ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಉಪಸಮಿತಿಗೆ ಧನ್ಯವಾದ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ದತ್ತಪೀಠದ ಜಮೀನು ಅನ್ಯರ ಪಾಲು:ಸರ್ಕಾರಿ ದಾಖಲೆ ಪ್ರಕಾರ ಉಳುವವನೇ ಹೊಲದೊಡೆಯ ಮಸೂದೆ ಮುಂಚೆ ದತ್ತಾತ್ರೇಯ ದೇವರ ಹೆಸರಲ್ಲಿ 1,861 ಎಕರೆ ಜಾಗವಿದ್ದಿತ್ತು. ಕಾಂಗ್ರೆಸ್ ಆಡಳಿತದಲ್ಲಿ ದತ್ತಾತ್ರೇಯ ದೇವರ ಹೆಸರಿನ ಜಮೀನನ್ನು ಗೇಣಿದಾರಲ್ಲದವರಿಗೆ ಅಕ್ರಮ ಮಂಜೂರು ಮಾಡಿರುವ ಮಾಹಿತಿ ಈಗ ಲಭಿಸಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮ ಮಂಜೂರಿ ರದ್ಧುಗೊಳಿಸಲು ಆಗ್ರಹಿಸುವೆ. ಈ ಸಮಗ್ರ ತನಿಖೆಗಾಗಿ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ರಚಿಸಲು ವಿನಂತಿಸುವೆ ಎಂದರು.
ದತ್ತಪೀಠ ವಿಚಾರ ಕಾಂಗ್ರೆಸ್ ನಿರ್ಲಕ್ಷ್ಯ: ಹಿಂದೆ ಸುಪ್ರೀಂ ಕೋರ್ಟ್ ದತ್ತ ಪೀಠದ ವಿಚಾರದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರಕಾರಕ್ಕೆ ವಹಿಸಿತ್ತು. ಆದರೆ, ಸಿದ್ದರಾಮಯ್ಯ ಸರಕಾರವು ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಇದು ಸೂಕ್ಷ್ಮ ವಿಚಾರ ಎಂದಿದ್ದರು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದರು. ಸತ್ಯಾಸತ್ಯತೆ ಪರಿಶೀಲಿಸದೇ ಕ್ರಮ ಕೈಗೊಂಡಿದ್ದರು. ಹಿಂದೂ ಅರ್ಚಕರ ನೇಮಕಾತಿ ತಿರಸ್ಕರಿಸಿದ ಸಿದ್ದರಾಮಯ್ಯ ಅವರದು ಯಾವ ಸೀಮೆ ಜಸ್ಟಿಸ್, ಇನ್‍ಸಾನಿಯತ್ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ಕ್ಷೇಮೆ ಕೇಳಲಿ:ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುವ ಕಾಲ ಮುಗಿದಿದೆ. ನಿಮ್ಮ ಓಲೈಕೆ ನೀತಿಯ ಪರಮಾವಧಿ ಅದಾಗಿತ್ತು. ಇದಕ್ಕಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ದೇಶದ್ರೋಹಿಗಳಿಗೆ ಮೋದಿ ಭಸ್ಮಾಸುರ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ್ರೋಹಿಗಳಿಗೆ ಭಸ್ಮಾಸುರ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ರವಿ ಅವರು, ದೇಶವನ್ನು ರಕ್ಷಿಸುವ ಹಾಗೂ ಜನರನ್ನು ಬದುಕಿಸಿದ ವಿಚಾರದಲ್ಲಿ ಮೋದಿಜಿ ಅವರು ಶ್ರೀಮನ್ನಾರಾಯಣ ಎಂದು ಪ್ರಶ್ನೆಗೆ ಉತ್ತರಿಸಿದರು. ಜನರ ಪಾಲಿಗೆ ಅವರು ಕಲ್ಪವೃಕ್ಷ, ಕಾಮಧೇನು ಎಂದರು.
ಗುಜರಾತ್, ಹಿಮಾಚಲದಲ್ಲಿ ಬಿಜೆಪಿ ಖಚಿತ:ಗುಜರಾತ್‍ನಲ್ಲಿ ಒಂದೂವರೆ ತಿಂಗಳ ಕಾಲ ಚುನಾವಣೆ ಕೆಲಸ ಮಾಡಿದ್ದು, ಅಲ್ಲಿ ಬಿಜೆಪಿ ಪರವಾದ ಅಲೆ ಇದೆ. ಮೋದಿಯವರು ಜನರ ಹೃದಯ ಗೆದ್ದಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೇರುವುದು ಶತಸಿದ್ಧ. ಹಿಮಾಚಲ ಪ್ರದೇಶದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. 2022ರ ಗುಜರಾತ್ ಫಲಿತಾಂಶ 2024ರ ಲೋಕಸಭೆ ಚುನಾವಣೆ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಿದರು.