ಬೆಂಗಳೂರು: "ಕಾಂಗ್ರೆಸ್ನಲ್ಲಿ ಒಳಬೇಗುದಿ ಹೆಚ್ಚಾಗಿದ್ದು, ಲೋಕಸಭೆ ಚುನಾವಣೆಯ ನಂತರ ಸರ್ಕಾರ ಪತನವಾಗುವ ಲಕ್ಷಣ ಗೋಚರಿಸಿದೆ" ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ತಮ್ಮದೇ ಪಕ್ಷದ ಶಾಸಕರ ಪತ್ರದ ಒಕ್ಕಣೆಯ ಆಧಾರದ ಮೇಲೆ ಸಭೆ ಮಾಡುತ್ತಿದೆ. ಹಾಗಾಗಿ ಶಾಸಕರು ಬರೆದ ಪತ್ರ ನಕಲಿ ಅಲ್ಲ ಅನ್ನೋದು ಸ್ಪಷ್ಟ" ಎಂದರು.
"ಪತ್ರ ಅಸಲಿ ಎಂದು ಒಪ್ಪಿಕೊಂಡಿದ್ದೀರಿ. ಆಡಳಿತ ಪಕ್ಷದ ಶಾಸಕರು ಒಂದು ಟಿಸಿಯನ್ನೂ ಕೊಡಲಾಗ್ತಿಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಶಾಸಕರು ಬರೆದ ಪತ್ರ ನಕಲಿ ಎನ್ನುವುದಾದರೆ ಸರಣಿ ಸಭೆ ಏಕೆ ಬೇಕಿತ್ತು?. ಪತ್ರ ನಕಲಿ ಆಗಿದ್ದರೆ ಆತಂಕಕ್ಕೆ ಒಳಗಾಗಬೇಕಿರಲಿಲ್ಲವಲ್ಲ?. ಹಾಗಾಗಿ, ಅಸಲಿ ಪತ್ರ ಎಂದು ಒಪ್ಪಿಕೊಂಡಂತಾಗಿದೆ. ಶಾಸಕರಿಗೆ ಪಕ್ಷದ ಮೇಲೆ ವಿರೋಧ ಶುರುವಾಗಿದೆ. ನಾನು ಜ್ಯೋತಿಷ್ಯ ಹೆಚ್ಚು ನಂಬಿಲ್ಲ. ಇದೇ ರೀತಿಯ ಅಸಹನೆ ಮುಂದುವರೆದರೆ, ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಮೂಡಿದೆ" ಎಂದು ಹೇಳಿದರು.
"ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು 6 ಜನ ಸತ್ತಿದ್ದಾರೆ. ಸರ್ಕಾರಕ್ಕೆ ಚಿಕಿತ್ಸೆ ಕೊಡಲಾಗದಷ್ಟು ಅಸಹಾಯಕತೆ ಇದೆ. ಯಾದಗಿರಿಯಲ್ಲಿ ಕಲುಷಿತ ನೀರು ಅಂತೆಲ್ಲಾ ಬಂದಿತ್ತು. ಚಿತ್ರದುರ್ಗದಲ್ಲಿ ನಿನ್ನೆ 6ನೇ ಬಲಿ ಆಗಿದೆ. ಸರ್ಕಾರ ಎರಡೂವರೆ ತಿಂಗಳಲ್ಲೇ ಜನರ ವಿಶ್ವಾಸ ಕಳೆದುಕೊಂಡಿದೆ. ಎರಡೂವರೆ ತಿಂಗಳಲ್ಲಿ ಅಸಹನೆ ವ್ಯಕ್ತವಾಗಿರೋದು ಇದೇ ಮೊದಲು. ಹೀಗೆ ಶಾಸಕರ ಅಸಮಾಧಾನ ಮುಂದುವರಿದರೆ ಸ್ಫೋಟ ಆಗುತ್ತದೆ" ಎಂದು ಭವಿಷ್ಯ ನುಡಿದರು.