ಬೆಂಗಳೂರು: ನಮ್ಮ ಪಾರ್ಟಿಗೆ ಯಾವುದೇ ಜಾತಿ ಇಲ್ಲ, ನಮ್ಮ ಪಾರ್ಟಿಗೆ ಇರುವುದು ಸಿದ್ಧಾಂತ ಮಾತ್ರ. ಆ ಸಿದ್ಧಾಂತದ ಆಧಾರದ ಮೇಲೆ ಪಾರ್ಟಿ ಬೆಳೆದಿದೆ ಎಂದು ಸಿಎಂ ಪರ ಹೇಳಿಕೆ ನೀಡುತ್ತಿರುವ ಮಠಾಧೀಶರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪರೋಕ್ಷ ಟಾಂಗ್ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಬೆಳವಣಿಗೆಗೆ ನೂರಾರು ಮಠಾಧಿಪತಿಗಳು ಬೆಂಬಲ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ನಾವು ಚುನಾವಣೆಯಲ್ಲಿ 100 ಕ್ಕು ಹೆಚ್ಚು ಸ್ಥಾನ ಗೆದ್ದಿದ್ದು. ನಮ್ಮ ಪಕ್ಷಕ್ಕೆ ಜಾತಿ ಇಲ್ಲ. ಸಿದ್ದಾಂತದ ಪಕ್ಷ ನಮ್ಮದು. ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುವಾಗ ಹೊಡೆತ ತಿಂದವರು. ನಮ್ಮ ಪಾರ್ಟಿಯಲ್ಲಿ ಎಂಎಲ್ಎ ಇದ್ದದ್ದು ಯಡಿಯೂರಪ್ಪ ಒಬ್ಬರೆ. ನಾನು ಬಾವುಟ ಕಟ್ಟುತ್ತಿದ್ದೆ. ಆಗ ದೇವೇಗೌಡರು ಪಕ್ಷ ಸೇರು ಅಂದಿದ್ದರು. ನಮ್ ಈ ಪಕ್ಷದ ಸಿದ್ದಾಂತ ದೇಶದ ಹಿತವಾಗಿತ್ತು. ಅದಕ್ಕೆ ನಾನು ಬಿಜೆಪಿಗೆ ಬಂದೆ. ನಮಗೆ ಅಧಿಕಾರ ಸಿಕ್ಕಾಗ ಜಾತಿ ಬರುತ್ತೆ. ನಾವು ಜೈಲಿಗೆ ಹೋಗುವಾಗ ಯಾವ ಜಾತಿ ಬರಲಿಲ್ಲ. ಎಲ್ಲ ಜಾತಿಗಳ ಸಹಕಾರ ಇದ್ದರೆ ಮಾತ್ರ ಅಧಿಕಾರ ಇಲ್ಲವಾದರೆ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದರು.