ಬೆಂಗಳೂರು: "ಬಿಜೆಪಿಯ ಕೆಲ ಶಾಸಕರು ಪಕ್ಷ ಬಿಡುವ ಬಗ್ಗೆ ವಿಷಯ ಕೇವಲ ವದಂತಿ. ನಮ್ಮಿಂದ ಕಾಂಗ್ರೆಸ್ಗೆ ಹೋಗುವವರು ಯಾರೂ ಇಲ್ಲ. ಕೇವಲ ಸುದ್ದಿ ಹರಡಿಸಿದ್ದಾರೆ ಅಷ್ಟೇ. ಅಪನಂಬಿಕೆಯಿಂದ ನಾನು ಯಾರನ್ನೂ ನೋಡಲ್ಲ" ಎಂದು ಸಿ.ಟಿ.ರವಿ ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಶಾಸಕರು ಕಾಂಗ್ರೆಸ್ಗೆ ವಾಪಸ್ ವಿಚಾರದ ಚರ್ಚೆ ನಡೆಯುತ್ತಿದೆ. ಆದರೆ ನನಗೆ ಗೊತ್ತಿದ್ದಂತೆ ಯಾರೂ ಹೋಗುವವರು ಇಲ್ಲ. ಒಂದು ಸಲ ಅನುಮಾನ ಬಂದರೆ ಎಲ್ಲರನ್ನೂ ಅಪನಂಬಿಕೆಯಿಂದ ನೋಡಬೇಕಾಗುತ್ತದೆ. ಆದರೆ ನಾನು ಯಾರನ್ನೂ ಅನುಮಾನದಿಂದ ನೋಡಲ್ಲ" ಎಂದರು.
"ಡಿ.ಕೆ.ಶಿವಕುಮಾರ್ ರಾಜಕೀಯ ಗುರು ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆ ಚರ್ಚೆಯಾಗುತ್ತಿದೆ. ಆದರೆ ಯಾವ ರೀತಿಯ ಗುರು ಅಂತಾ ಅವರು ಹೇಳಿಲ್ಲ, ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಒಂದೋ ಇವರು ಗುರುವಿನ ಮಾತು ಮೀರಿರಬಹುದು ಅಥವಾ ಗುರುವೇ ಇವರಿಗೆ ಬೆಂಬಲ ಕೊಟ್ಟಿರಬಹುದು" ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಬಳಿಕ ಅಥವಾ ಮುನ್ನ ಸರ್ಕಾರ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಅವರಿಗೆ ಯಾರೋ ಸಂಪರ್ಕದಲ್ಲಿರಬಹುದು, ಹೀಗಾಗಿ ಮಾಹಿತಿ ಇರಬಹುದು. ಮಾಹಿತಿ ಇಲ್ಲದೇ ಅವರು ಹೇಳಲು ಸಾಧ್ಯವೇ? ಈಗ ಯಾರ ಮಾತನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಸರಿಯಿದ್ದರೆ ಎರಡು ತಿಂಗಳಲ್ಲಿ ಶಾಸಕರು ಪತ್ರ ಬರೆಯುತ್ತಿರಲಿಲ್ಲ, ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿರಲಿಲ್ಲ. ಯತ್ನಾಳ್ ಹೇಳಿಕೆಯನ್ನು ಅಲ್ಲಗಳೆಯಲು ಸಾಧ್ಯವೇ? ಇನ್ನೂ ಆರು ತಿಂಗಳು ಕಾದು ನೋಡಬೇಕು" ಎಂದು ತಿಳಿಸಿದರು.
"ಸಿ.ಟಿ.ರವಿಗೆ ಟ್ರೀಟ್ಮೆಂಟ್ ಕೊಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಆದರೆ ನಾನು ರೋಗಿಯೂ ಅಲ್ಲ, ಅವರು ಡಾಕ್ಟರೂ ಅಲ್ಲ. ಅಜ್ಜಯ್ಯನ ಹೇಳಿಕೆಯೂ ನನ್ನದಲ್ಲ ನನ್ನಲ್ಲಿ ಕೊರತೆ ಇರುವುದನ್ನು ಅವರು ತುಂಬಬೇಕು ಅಂತಾದರೆ ಅವರ 1,500 ಕೋಟಿ ವೈಟ್ ಮನಿಯನ್ನು ನನಗೆ ಟ್ರಾನ್ಸ್ ಫರ್ ಮಾಡಬೇಕು, ಆದರೆ ಅದು ನನಗೆ ಖಂಡಿತಾ ಬೇಡ ಅವರ ಕೋಟಿ ಗಳಿಕೆಯ ಸಿದ್ಧ ವಿದ್ಯೆಯನ್ನು ಜನರಿಗೆ, ಕೃಷಿಕರಿಗೆ ಹೇಳಿ ಕೊಟ್ಟರೆ ಜನ ದೇವರು ಅಂತಾ ಭಾವಿಸುತ್ತಾರೆ" ಎಂದರು.