ಬೆಂಗಳೂರು: ಹಿಂದಿನ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಓಲೈಕೆ ಮಾಡುತ್ತಿತ್ತು. ಆದರೆ, ನಾವು ಆ ರೀತಿ ಯಾವುದೇ ಓಲೈಕೆ ಮಾಡಲ್ಲ. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರ್ ಒಬ್ಬ ಮಾನವೀಯ ಕಳಕಳಿ ಇದ್ದ ವ್ಯಕ್ತಿ. ಪ್ರಾಣಿಗೂ ಯಾವುದೇ ಸಮಸ್ಯೆ ಮಾಡದ ವ್ಯಕ್ತಿ ಆತ. ನಾನು ಶಬ್ದಗಳಲ್ಲಿ ಸಂತಾಪ ಸೂಚಿಸುವುದಿಲ್ಲ. ಜಿಹಾದಿ ಮಾನಸಿಕತೆಗೆ ಕೊನೆಯೇ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತಿದೆ. ನಾವು ಮಾಡ್ತಾನೆ ಇರ್ತೀವಿ. ಕಠಿಣ ಕ್ರಮ ತೆಗೆದುಕೊಳ್ಳಿ ನೋಡೋಣ ಅನ್ನೋ ಮನಸ್ಥಿತಿ ಅವರದ್ದು. ಕೇಂದ್ರದಲ್ಲಿ, ರಾಜ್ಯದಲ್ಲಿ ಎರಡೂ ಕಡೆ ನಾವೇ ಇದ್ದರೂ ಏನೂ ಮಾಡಲಾಗ್ತಿಲ್ಲ.ಕಾರ್ಯಕರ್ತರು ಅಸಹಾಯಕತೆ ತೋಡಿಕೊಳ್ತಿದ್ದಾರೆ ಎಂದರು.
ಚಂದ್ರು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ.? ಕಾರ್ಯಕರ್ತರ ಭಾವನೆ ಜೊತೆಗೆ ನಾವೂ ಇದ್ದೇವೆ. ಕೇವಲ ಅಧಿಕಾರ ಮಾಡಲು ಬಂದಿಲ್ಲ. ಅವರ ಭಾವನೆ ಜೊತೆಗೆ ನಾವೂ ನಿಲ್ಲುತ್ತೇವೆ. ವ್ಯವಸ್ಥೆಯನ್ನ ಜಿಹಾದ್ ವಿರುದ್ಧ ಹೋರಾಟ ಮಾಡಲು ಅಣಿಗೊಳಿಸಬೇಕು. ಅಮರಾವತಿಯಲ್ಲಿ, ಉದಯಪುರದಲ್ಲಿ ನಡೆದ ಒಂದು ಘಟನೆಯ ಭಾಗ ಇದು.
ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆ ಅನ್ನೋ ಆರೋಪ ಇದೆ. ಹಿಂದೆ ಹಿಂದೂ ವಿರೋಧಿ ಸರ್ಕಾರವಿತ್ತು. ಈಗ ಹಿಂದೂ ಪರ ಸರ್ಕಾರ ಇದೆ. ಆದರೂ ಹೀಗಾಗ್ತಿದೆ ಅನ್ನೋ ಆತಂಕ ಕಾರ್ಯಕರ್ತರದ್ದು. ಆದರೆ, ಸರ್ಕಾರವನ್ನು ನಾವು ಸಮರ್ಥನೆ ಮಾಡಿಕೊಳ್ಳೋದಿಲ್ಲ. ಜಿಹಾದ್ ಕಿತ್ತುಹಾಕಲು ನಾವು ಬದ್ಧರಿದ್ದೇವೆ. ನಾವೀಗ ಆ್ಯಕ್ಷನ್ ಮಾಡದಿದ್ದರೆ ನಾವೇ ಹೊಣೆ ಹೊರಬೇಕು ಎಂದರು.
ವ್ಯಂಗ್ಯವಾಗಿ ಮಾತನಾಡಲು ಬರುತ್ತದೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಮೂರು ವರ್ಷವಾಗಿದೆ. ಯಡಿಯೂರಪ್ಪ ಎರಡು ವರ್ಷ, ಬೊಮ್ಮಾಯಿ ಅವರು ಒಂದು ವರ್ಷ. ಅನೇಕ ಯೋಜನೆಗಳನ್ನು ತರಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಸಿದ್ದರಾಮಯ್ಯ ಕೊಡಲಿಲ್ಲ, ಪ್ರಧಾನಿ ಮೋದಿ ಕೊಟ್ಟಿದ್ದು. ಅನ್ನಭಾಗ್ಯ ಅನ್ನಭಾಗ್ಯ ಅಂತಾರೆ. ಶೇ. 80ರಷ್ಟು ಕೊಟ್ಟಿದ್ದು ಕೇಂದ್ರ ಸರ್ಕಾರ. ಬಿಜೆಪಿಯ ಜನೋತ್ಸವ ಟೀಕೆ ಮಾಡ್ತಾರೆ ಇವರು. ಹಾಗಾದರೆ ಸಿದ್ದರಾಮೋತ್ಸವ ಮಾಡ್ತಿದ್ದಾರೆ. ಅದು ಬಟ್ಟಂಗಿ ಉತ್ಸವಾನಾ.? ನಮಗೂ ವ್ಯಂಗ್ಯವಾಗಿ ಮಾತನಾಡಲು ಬರುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.