ಕರ್ನಾಟಕ

karnataka

ETV Bharat / state

ತಮಿಳುನಾಡಿನ 20 ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ: ಸಿ ಟಿ ರವಿ ವಿಶ್ವಾಸ - ಸಿಟಿ ರವಿ

ಬಿಜೆಪಿ ವೆಟ್ರಿವೇಲ್ ಯಾತ್ರೆ ಮಾಡಿದ್ದು ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಯಿತು. ನಂತರ ನಾಸ್ತಿಕವಾದವನ್ನು ಪ್ರತಿಪಾದಿಸುತ್ತಿದ್ದ ಡಿಎಂಕೆ ಮೊದಲ ‌ಬಾರಿಗೆ ವೇಲ್​​ಅನ್ನು ಹಿಡಿದುಕೊಂಡು ಪ್ರಚಾರ ಮಾಡಿತು, ಇಷ್ಟು‌ವರ್ಷ ದೇವಸ್ಥಾನದ ಬಗ್ಗೆ, ಭಕ್ತರ ಬಗ್ಗೆ ಮಾತನಾಡದ ಡಿಎಂಕೆ ಈಗ ಮಾತನಾಡಲು ಶುರು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತಮಿಳುನಾಡು ಚುನಾವಣಾ ಉಸ್ತುವಾರಿ ಸಿ ಟಿ ರವಿ ಹೇಳಿದ್ದಾರೆ.

ct-ravi
ಸಿಟಿ ರವಿ

By

Published : Apr 5, 2021, 7:05 PM IST

ಬೆಂಗಳೂರು:ಈ ಬಾರಿ ತಮಿಳುನಾಡಿನ‌‌ ಚುನಾವಣಾ ಅಜೆಂಡಾವನ್ನು‌ ಬಿಜೆಪಿ ಫಿಕ್ಸ್ ಮಾಡಿದೆ, ವೆಟ್ರಿವೇಲ್ ಯಾತ್ರೆ, ಜಲ್ಲಿಕಟ್ಟು ಮೂಲಕ ತಮಿಳುನಾಡಿನ‌ ಅಸ್ಮಿತೆಯೊಂದಿಗೆ ಪಕ್ಷದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿದ್ದು, ಕಮಲ ಅರಳುವುದು ಖಚಿತ ಎಂದು ತಮಿಳುನಾಡು ಉಸ್ತುವಾರಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಚುನಾವಣಾ ಪ್ರಚಾರ ಮುಗಿಸಿ ರಾಜ್ಯಕ್ಕೆ ಮರಳಿದ ನಂತರ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಬಿಜೆಪಿ ಮೇಜರ್ ಪಾರ್ಟಿ ಅಲ್ಲ, ಎಐಡಿಎಂಕೆ ಮೇಜರ್ ಪಾರ್ಟಿ, ಎಐಡಿಎಂಕೆ ಜೊತೆಗೆ ಬಿಜೆಪಿ ಸೇರಿ ಇತರ ಸಣ್ಣಪುಟ್ಟ ಜನ, ಜಾತಿಯ ಪಕ್ಷಗಳು ಸ್ಪರ್ಧೆ ಮಾಡಿದ್ದು, ನಮ್ಮ ಎದುರಾಗಿ ಡಿಎಂಕೆ, ಕಾಂಗ್ರೆಸ್ ಇತರ ಪಕ್ಷಗಳ ಒಕ್ಕೂಟ ಸ್ಪರ್ಧಿಸಿದೆ. ಕಮಲಹಾಸನ್ ಪಕ್ಷ, ವಿಜಯಕಾಂತ್ ಪಕ್ಷಗಳೂ ಕೂಡ ಅಖಾಡದಲ್ಲಿವೆ. ಆದರೆ ಮೇಲ್ನೋಟಕ್ಕೆ ಡಿಎಂಕೆ, ಎಐಡಿಎಂಕೆ ನಡುವೆ ಸ್ಪರ್ಧೆ ಕಾಣುತ್ತಿದೆ. ಆದರೆ ಇಡೀ ಚುನಾವಣಾ ಪ್ರಚಾರವನ್ನು ಬಿಜೆಪಿ ಸೆಟ್ ಮಾಡಿದೆ ಎಂದರು.

ತಮಿಳುನಾಡು ಚುನಾವಣೆ ಕುರಿತು ಸಿಟಿ ರವಿ ಪ್ರತಿಕ್ರಿಯೆ

ಬಿಜೆಪಿ ವೆಟ್ರಿವೇಲ್ ಯಾತ್ರೆ ಮಾಡಿದ್ದು ಅಭೂತಪೂರ್ವ ಜನಸ್ಪಂಧನೆ ವ್ಯಕ್ತವಾಯಿತು. ನಂತರ ನಾಸ್ತಿಕವಾದವನ್ನು ಪ್ರತಿಪಾದಿಸುತ್ತಿದ್ದ ಡಿಎಂಕೆ ಮೊದಲ ‌ಬಾರಿಗೆ ವೇಲ್​​ಅನ್ನು ಹಿಡಿದುಕೊಂಡು ಪ್ರಚಾರ ಮಾಡಿತು. ಇಷ್ಟು‌ವರ್ಷ ದೇವಸ್ಥಾನದ ಬಗ್ಗೆ, ಭಕ್ತರ ಬಗ್ಗೆ ಮಾತನಾಡದ ಡಿಎಂಕೆ ಈಗ ಮಾತನಾಡಲು ಶುರು ಮಾಡಿದೆ. ನಾವು ಅಜೆಂಡಾ ಸೆಟ್ ಮಾಡಿದ್ದೆವು, ಅದರಂತೆ ಈಗ ಡಿಎಂಕೆ ಪ್ರಣಾಳಿಕೆ ಮಾಡಿದೆ.

ಯುಪಿಎ ಸಮಯದಲ್ಲಿ ಜೆಲ್ಲಿಕಟ್ಟು ನಿಷೇಧಿಸಿತ್ತು, ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು, ಆದರೆ 2016ರಲ್ಲಿ ಮೋದಿ ಸರ್ಕಾರದ ವೇಳೆ ಇದು ಪ್ರಾಣಿಗಳನ್ನು ಕ್ರೂರವಾಗಿ ಬಳಸಿಕೊಳ್ಳುವ ಆಟವಲ್ಲ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಟ ಎಂದು ಮರಳಿ ಜಾರಿಗೆ ತರಲಾಯಿತು. ನಾವು ಜೆಲ್ಲಿಕಟ್ಟಿನಿಂದ ದೂರ ಉಳಿದರೆ ಮತಗಳು ಬರಲ್ಲ ಎನ್ನುವ ಕಾರಣಕ್ಕೆ ಜಲ್ಲಿಕಟ್ಟು ವಿರೋಧಿಸಿದ್ದವರೇ ಜಲ್ಲಿಕಟ್ಟಿಯಲ್ಲಿ ಭಾಗಿಯಾದರು. ಅವರಿಗೆ ಮತ ಮುಖ್ಯವಾಗಿತ್ತು ನಮಗೆ ಸಂಸ್ಕೃತಿ ಉಳಿಸಬೇಕಿತ್ತು. ಅದರಂತೆ ನಾವು ಅಜೆಂಡಾ ಸೆಟ್ ಮಾಡಿದ್ದೆವು, ಅದು ಫಲಪ್ರದವಾಗಿದೆ ಎಂದರು.

ಗೆದ್ದ ಅನುಭವ ಧಾರೆ ಎರೆದ ಕನ್ನಡಿಗರು

ಕರ್ನಾಟಕದಲ್ಲಿ ಗೆದ್ದ ಅನುಭವವನ್ನು ಧಾರೆ ಎರೆದು ತಮಿಳುನಾಡಿಗೆ ಗೆಲುವಿಗೆ ಕರ್ನಾಟಕದ ಜನಪ್ರತಿನಿಧಿಗಳು, ನಾಯಕರು ಪರಿಶ್ರಮ ಹಾಕಿದ್ದಾರೆ. ಕರ್ನಾಟಕದಿಂದ ಬಂದು ಪ್ರಚಾರ ನಡೆಸಿದ್ದಾರೆ. ನಾವು ಕೇವಲ 20 ಸ್ಥಾನದಲ್ಲಿ ಸ್ಪರ್ಧೆ ಮಾಡಿದ್ದರೂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡೊದ್ದೇವೆ, ಪ್ರಧಾನಿ ಮೋದಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ವೇಳೆ ವೆಲ್ ಕಮ್ ಮೋದಿ ಟ್ರೆಂಡ್ ಸೆಟ್ ಮಾಡಿದ್ದೆವು. ರಾಷ್ಟ್ರೀಯ ಅಧ್ಯಕ್ಷರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಮೋದಿ 4, ಅಮಿತ್ ಶಾ 6 ಸಭೆಗಳಲ್ಲಿ ಭಾಗಿಯಾಗಿದ್ದರು. ಸ್ಮೃತಿ ಇರಾನಿ, ಯೋಗಿ ಆದಿತ್ಯನಾಥ್ ಹೀಗೆ ಎಲ್ಲ ನಾಯಕರು ಭಾಗಿಯಾಗಿದ್ದರು. 20 ಕ್ಷೇತ್ರದಲ್ಲೂ ಪ್ರಚಾರದಲ್ಲಿ ಹಿಂದೆ ಉಳಿದಿರಲಿಲ್ಲ, ನಮ್ಮ ಪರ ಅಲೆ ಕಂಡುಬಂದಿದೆ, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ, ನಮ್ಮ ಪ್ರಯತ್ನ ವಿಫಲವಾಗಲ್ಲ ಎಂದರು.

ವಿನ್ ದಿ ಬೂತ್ ಟಾರ್ಗೆಟ್:

ನಮ್ಮ ಕಾರ್ಯಕರ್ತರಿಗೆ ವಿನ್ ದಿ ಬೂತ್ ವಿನ್ ದಿ ಎಲೆಕ್ಷನ್ ಟಾರ್ಗೆಟ್ ಕೊಟ್ಟಿದ್ದೆವು, ಅದರಂತೆ ಕೆಲಸ ಮಾಡಿದ್ದಾರೆ. ಕರ್ನಾಟಕದ ರೀತಿಯಲ್ಲಿ ಸಂಘಟನೆ ಮಾಡಿದ್ದೇವೆ. ಈ ಬಾರಿ ತಮಿಳು ಅಸ್ಮಿತೆ, ಅಭಿವೃದ್ಧಿ ಚರ್ಚೆಗೆ ಇಟ್ಟು ಮತ ಕೇಳಿದ್ದೇವೆ, ಡಿಎಂಕೆ, ಕಾಂಗ್ರೆಸ್​ನ ಭ್ರಷ್ಟಾಚಾರ ಮತ್ತು ಎಐಡಿಎಂಕೆ, ಬಿಜೆಪಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ, ಎಲ್ಲವನ್ನೂ ಜನರ ಮುಂದಿಟ್ಟಿದ್ದೇವೆ, ಯಾರು ನಿಜವಾದ ಸ್ನೇಹಿತ, ಯಾರು ನಿಜವಾದ ಶತ್ರು ಎನ್ನುವ ವಿಚಾರವನ್ನು ಜನರ ಮುಂದಿಟ್ಟಿದ್ದೇವೆ. ಜನರು ಎಲ್ಲವನ್ನೂ ತೀರ್ಮಾನಿಸಲಿದ್ದಾರೆ ಎಂದರು.

ನಾಳೆ ಚುನಾವಣೆ ಇದೆ, ನಾಳೆ ದೇಶದಲ್ಲಿ ಬಿಜೆಪಿಗೆ ವಿಶೇಷ ದಿನ, ಬಿಜೆಪಿ ಸ್ಥಾಪನಾ ದಿನ, 41 ವರ್ಷದ ಪರಿಶ್ರಮದಿಂದ 2 ಸದಸ್ಯ ಬಲದಿಂದ‌ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ತಮಿಳುನಾಡಿನಲ್ಲಿ ಈ ಬಾರಿ ಕಮಲ ಅರಳಲಿದೆ, ಎಐಡಿಎಂಕೆ ಅಧಿಕಾರಕ್ಕೆ ಬರಲಿದೆ. 20 ಸ್ಥಾನವನ್ನೂ ಗೆಲ್ಲಲು ಪ್ರಯತ್ನಿಸಿದ್ದೇವೆ, ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿಗೂ ಶ್ರಮಿಸಿದ್ದೇವೆ.

ಡಿಎಂಕೆ ಕಾರ್ಪೊರೇಟ್ ಕಂಪನಿ:

ತಮಿಳು ಅಸ್ಮಿತೆಗೆ ವಿರುದ್ಧವಾಗಿ ಡಿಎಂಕೆ ರಾಜಕಾರಣ ಮಾಡುತ್ತಿದೆ, ಕಾರ್ಪೊರೇಟ್ ಕಂಪನಿಯಂತಾಗಿದೆ. ಮಾರನ್, ಕನಿಮೋಳಿ ಷೇರು ಹೊಂದಿದೆ. ನಮ್ಮ ಪಕ್ಷದ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸಿದ್ದೇವೆ. ಲೋಕಸಭೆಯಲ್ಲೂ ಒಟ್ಟಾಗಿ ಸ್ಪರ್ಧಿಸಲಿದೆ. ತಮಿಳುನಾಡು ಕಬ್ಬಿಣದ ಕಡಲೆ ಅಲ್ಲ,‌ ಕಷ್ಟಪಟ್ಟರೆ ಫಲಿತಾಂಶ ಸಿಗುವ ಎಲ್ಲ ಅವಕಾಶ ಇರುವ ರಾಜ್ಯವಾಗಿದೆ ಎಂದರು.

ಜಯಲಲಿತಾ ಆಪ್ತೆ ಶಶಿಕಲಾ ರಾಜಕೀಯ ನಿವೃತ್ತಿ ಘೋಷಣೆ ಜೊತೆಗೆ ಎಐಡಿಎಂಕೆ ಬೆಳವಣಿಗೆ ಪರವಾಗಿಯೂ ಹೇಳಿಕೆ ನೀಡಿದ್ದಾರೆ. ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ಜಯಲಲಿತಾ ಆಶಯಕ್ಕೆ ವಿರುದ್ಧವಾಗಿ ನಿಲ್ಲಲ್ಲ ಎಂದಿದ್ದಾರೆ ಎಂದು ಶಶಿಕಲಾ‌ ರಾಜಕೀಯ ನಿವೃತ್ತಿ ಬಗ್ಗೆ ಸಿ ಟಿ ರವಿ ವ್ಯಾಖ್ಯಾನಿಸಿದರು.

ಪೆರಿಯಾರ್ ಬಗ್ಗೆ ಏನೂ ಹೇಳಲ್ಲ, ಚಾರ್ವಾಕನಂತಹ ನಾಸ್ತಿಕನನ್ನೂ‌ ಗೌರವಿಸಿದ ಸಂಸ್ಕೃತಿ ನಮ್ಮದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌನ, ತಮಿಳುನಾಡಿನಲ್ಲಿ ತಮಿಳೇ ಸಾರ್ವಭೌಮ. ಪೆರಿಯಾರ್ ನ ನಂಬುವವರು ನಂಬಬಹುದು, ನಾವು ಯಾರನ್ನೂ ಅವಹೇಳನ ಮಾಡಲ್ಲ,‌ ದೇಶ ಒಂದು ಎನ್ನುವ ಪರಿಕಲ್ಪನೆ ನಮ್ಮದು ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ ಟಿ ರವಿ ಸ್ಪಷ್ಟಪಡಿಸಿದರು.

ABOUT THE AUTHOR

...view details