ಬೆಂಗಳೂರು:ಸಿಎಂ ಬಿಎಸ್ವೈ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಿರುವುದಕ್ಕೆ ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಸಚಿವ ಸಿ.ಟಿ ರವಿಯವರನ್ನು ಪಕ್ಷದ ಮುಖಂಡರು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರ ಖಾತೆ ಹಂಚಿಕೆ ಮಾಡುತ್ತಿದ್ದಂತೆಯೇ ಬಿಜೆಪಿ ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಪ್ರವಾಸೋದ್ಯಮ ಹಾಗು ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಿದ್ದಕ್ಕೆ ಬೇಸರಗೊಂಡು ಸಚಿವ ಸಿ.ಟಿ ರವಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿತ್ತು.
ಪ್ರವಾಸೋದ್ಯಮ ನೀಡಿದ್ದಕ್ಕೆ ಮುನಿಸು... ಒಂದೇ ಗಂಟೆಯಲ್ಲಿ ಸಿ.ಟಿ.ರವಿ ಸಿಟ್ಟು ಶಮನ
ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಿರುವುದಕ್ಕೆ ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಸಚಿವ ಸಿ.ಟಿ ರವಿಯವರನ್ನು ಪಕ್ಷದ ಮುಖಂಡರು ಮನವೊಲಿಸಿದ್ದಾರೆ.
ಸಿಎಂ ಖಾತೆ ಹಂಚಿಕೆ ಪ್ರಕಟಿಸುತ್ತಿದ್ದಂತೆ ಪಕ್ಷದ ಪ್ರಮುಖರ ಬಳಿ ಅಸಮಾಧಾನ ತೋಡಿಕೊಂಡ ಸಚಿವ ಸಿ.ಟಿ ರವಿ ಅವರು ಸರಕಾರ ನೀಡಿದ್ದ ಕಾರನ್ನು ಮತ್ತು ಸಿಬ್ಬಂದಿಯನ್ನು ವಾಪಸ್ ಕಳಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಯಂತಹ ಉತ್ತಮ ಖಾತೆಯನ್ನು ನಿರೀಕ್ಷಿಸಿದ್ದ ಅವರಿಗೆ ಕಿರಿಯ ಸಚಿವರಿಗೆ ನೀಡುವಂತಹ ಹೆಚ್ಚಿನ ಮಹತ್ವ ಇಲ್ಲದ ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದಾರೆ ಎನ್ನಲಾಗಿತ್ತು. ಬಳಿಕ ಒಂದು ತಾಸಿನಲ್ಲೇ ಪಕ್ಷದ ಮುಖಂಡರು ರವಿಯವರ ಜೊತೆ ಮಾತುಕತೆ ನಡೆಸಿ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಖಾತೆಯನ್ನು ಸಿ.ಟಿ ರವಿ ನಿಭಾಯಿಸಿದ್ದರು.