ಬೆಂಗಳೂರು:ಈ ಹಿಂದೆ ಇಸ್ಕಾನ್ ಯೋಜಿಸಿದ್ದ ಕೃಷ್ಣಾ ಥೀಮ್ ಪಾರ್ಕ್ಗೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ.ಶಿವಕುಮಾರ್ ಇಂದು ಏಸು ಪ್ರತಿಮೆ ನಿರ್ಮಿಸುವುದು ಸರಿನಾ? ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಕೊಂಡಚ್ಚಿ ಬಸಪ್ಪ ಸಭಾಂಗಣದಲ್ಲಿ ಮಾತನಾಡಿದ ಅವರು, ಅಂದು ಕೃಷ್ಣನಿಗೆ ಡಿಕೆಶಿ ಯಾಕೆ ವಿರೋಧ ಮಾಡಿದ್ದರು? ಕೃಷ್ಣನಿಗೆ ವಿರೋಧಿಸಿ ಏಸು ಪ್ರತಿಮೆ ನಿರ್ಮಿಸ್ತಿರೋದು ಸರಿನಾ? ಕ್ರಿಸ್ತ ಓಕೆ, ಆದರೆ ಕೃಷ್ಣಗೆ ವಿರೋಧ ಯಾಕೆ? ಡಿಕೆಶಿ ರಾಜಕಾರಣಿಯಾಗಿ ಬುದ್ಧಿವಂತರು. ಇದನ್ನು ವಿರೋಧ ಮಾಡಿದಷ್ಟು ಡಿಕೆಶಿಗೆ ರೊಟ್ಟಿ ತುಪ್ಪಕ್ಕೆ ಜಾರಿ ಬೀಳುತ್ತದೆ. ಅದು ಡಿಕೆಶಿಗೆ ಚೆನ್ನಾಗಿಯೇ ಗೊತ್ತು ಎಂದು ಟಾಂಗ್ ನೀಡಿದರು. ಮೇಲಿನವರ ಕೃಪಾಕಟಾಕ್ಷ ತಮ್ಮ ಮೇಲೆ ಬೀಳಲಿ ಅಂತ ಡಿಕೆಶಿ ಏಸು ಪ್ರತಿಮೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಯೋಚನೆ ಮಾಡಿ ಬುದ್ಧಿವಂತಿಕೆಯಿಂದ ಹೀಗೆ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕೆ ಯಾವ ದೇವರನ್ನು ಪ್ರತಿಷ್ಠಾಪಿಸಬೇಕು ಅನ್ನೋದು ಡಿಕೆಶಿಗೆ ಕರಗತವಾಗಿರುವ ವಿದ್ಯೆ ಎಂದು ಟೀಕಿಸಿದರು.