ಬೆಂಗಳೂರು: ಮಾಂಸದೂಟ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ಅವರವರ ವೈಯಕ್ತಿಕ ಆಯ್ಕೆಗಳಾಗಿವೆ. ಇದು ರಾಜಕೀಯ ಚರ್ಚಾ ವಸ್ತು ಆಗಬಾರದು. ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ ಸಿ ಟಿ ರವಿ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಅಪಪ್ರಚಾರ ಮಾಡಿದ್ದ ಬಿಜೆಪಿ: ’’ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಜಗತ್ತಿಗೆಲ್ಲ ಸತ್ಯ ಸಾರುತ್ತಿರುವಾಗ, ತಾನು ತಿಂದದ್ದು ನಿಜ, ದೇವಸ್ಥಾನದ ಒಳಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ನಿಂತು ಕೈಮುಗಿದಿದ್ದೇನೆ ಎಂಬ ಸಿ.ಟಿ. ರವಿ ಅವರ ವಾದ, ಸದಾ ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟು ಗುಣಕ್ಕೆ ತಕ್ಕ ಹಾಗೆಯೇ ಇದೆ. ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಆ ರೀತಿ ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿ.ಟಿ. ರವಿ ಅವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ‘‘ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಬಿಜೆಪಿ ನಾಯಕರ ಸುಳ್ಳು ಸುದ್ದಿಯನ್ನು ನಂಬಿ ನನ್ನನ್ನು ಟೀಕಿಸಿದ್ದ ರಾಜ್ಯದ ಕೆಲವು ಮಠಾಧೀಶರು, ಸಿ ಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮೌನವಾಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಸಿದ್ದಾಂತವಿಲ್ಲದ ಆತ್ಮವಂಚಕರ ಕೂಟ:ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಮೂಲಕ ಟ್ವೀಟ್ ಮಾಡಿ ತನ್ನ ಆಕ್ರೋಶ ಹೊರಹಾಕಿದೆ. ’’ಕಾಂಗ್ರೆಸ್‌ನವರು ತಿಂದರೆ ಮಾಂಸ, ಬಿಜೆಪಿಗರು ತಿಂದರೆ ಮಾಂಸವೂ ಕ್ಯಾರೆಟ್ ಹಲ್ವಾದಂತಾಗುತ್ತದೆಯೇ? ಮಾಂಸದೂಟ ಸೇವಿಸಿ ಹನುಮನ ದೇವಸ್ಥಾನಕ್ಕೆ ಹೋಗಿದ್ದ ಸಿ.ಟಿ. ರವಿ ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಬಾಯಿ ಬಡಿದುಕೊಳ್ಳುತ್ತಿಲ್ಲವೇಕೆ? ಈಗ ದೇವಾಲಯ ಮೈಲಿಗೆಯಾಗಿಲ್ಲವೇ? ಗೋಮೂತ್ರ ಎರಚುವುದಿಲ್ಲವೇ ರಾಜ್ಯ ಬಿಜೆಪಿ? ದ್ವೇಷ ಕಾರುವುದನ್ನೇ ಧರ್ಮ ಎಂದುಕೊಂಡಿರುವ ಬಾಯಿಹರುಕ ಸಿ.ಟಿ. ರವಿ ಅವರು ದೇವಸ್ಥಾನಕ್ಕೆ ಹೋಗುವ ಮುನ್ನ ತಿಂದ ಮಾಂಸದ ಮೆನು ಏನು ಬಿಜೆಪಿ? ಫಿಶ್ ಫ್ರೈ?ಚಿಕನ್ ಕಬಾಬ್? ಲೆಗ್ ಪೀಸ್?ಮಟನ್ ಕುರ್ಮಾ? ಚಿಕನ್ ಟಿಕ್ಕಾ? ನಾಟಿಕೋಳಿ ಸಾಂಬಾರ್? ಫೋರ್ಕ್ ಫ್ರೈ? ಬೀಫ್ ಬಿರಿಯಾನಿ? ಸಿಟಿ ರವಿ ತಟ್ಟೆಯನ್ನು ಬಿಜೆಪಿಗರು ಇಣುಕಿ ನೋಡಿಲ್ಲವೇ?‘‘ ಎಂದು ಪ್ರಶ್ನಿಸಿದೆ.
ಬಿಜೆಪಿ ಅಂದರೆ ಸಿದ್ದಾಂತವಿಲ್ಲದ ಆತ್ಮವಂಚಕರ ಕೂಟ. ಗೋಮಾತೆ ಎನ್ನುವ ಇದೇ ಬಿಜೆಪಿ ಕೇರಳ, ಗೋವಾ, ಮೇಘಾಲಯದ ಅವರದೇ ಪಕ್ಷದವರ ಗೋಮಾಂಸ ಸೇವನೆ ಬಗ್ಗೆ ಮಾತಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುವುದು ಅಪರಾಧ ಎನ್ನುವ ಬಿಜೆಪಿ ಸಿ.ಟಿ. ರವಿ ಬಗ್ಗೆ ತುಟಿ ಬಿಚ್ಚುವುದಿಲ್ಲ. ಈ ಡಬಲ್ ಸ್ಟ್ಯಾಂಡರ್ಡ್ ಬಿಜೆಪಿಗೆ ಮಾತ್ರ ಸಾಧ್ಯ! ಬಿಜೆಪಿ ನಾಯಕರು ಹೇಳುವ ಸುಳ್ಳಿಗೆ ಸತ್ಯ ಅನ್ನೋದು ಸೂಸೈಡ್ ಮಾಡಿಕೊಂಡು ಸಮಾಧಿಯಾಗುತ್ತದೆ! ಮಾಂಸ ತಿಂದಿದ್ದು ನಿಜ. ಆದರೆ, ದೇವಸ್ಥಾನಕ್ಕೆ ಹೋಗಿಲ್ಲ. ರೋಡಿನಲ್ಲೇ ನಿಂತಿದ್ದೇನೆ ಎನ್ನುವ ಸುಳ್ಳು ಏಕೆ ಸಿ.ಟಿ. ರವಿ? ರೋಡಿನಲ್ಲಿ ಘಂಟೆಗಳು ನೇತಾಡುತ್ತಿರುತ್ತವೆಯೇ? ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವುದು ಸುಳ್ಳೇ? ಎಂದು ಪ್ರಶ್ನೆ ಹಾಕಿದೆ.
ಬಿಜೆಪಿಯವರಿಗೆ ಎರಡು ನಾಲಿಗೆ ಇದೆ: ಬಿಜೆಪಿಯವರಿಗೆ ಎರಡು ನಾಲಿಗೆ ಇದೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪ್ರಿಯಾಂಕ ಖರ್ಗೆ ಸಿ ಟಿ ರವಿ ವಿರುದ್ಧ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಟಿ ರವಿ ಮಾಂಸ ತಿಂದು ದೇವಾಲಯಕ್ಕೆ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ದರು ಅಂತಾ ಯಾರೋ ಹೇಳದ್ದಿಕ್ಕೆ ಇಡೀ ಬಿಜೆಪಿಯವರು ಮುಗಿಬಿದ್ದಿದ್ದರು. ಅದಕ್ಕೆ ಸ್ಪಷ್ಟೀಕರಣ ಕೂಡ ಕೊಟ್ರು. ನಾನು ಮಾಂಸ ತಿನ್ನದೇ ದೇವಸ್ಥಾನಕ್ಕೆ ಹೋಗಿದ್ದು ನಿಜ ಎಂದು ಹೇಳಿದ್ರು. ಒಂದು ವೇಳೆ ತಿಂದಿದ್ರು ಕೂಡ ನೀವ್ಯಾರು ಕೇಳೋಕೆ ಅಂತಾ ಹೇಳಿದ್ರು ಎಂದರು.
ಆ ಪದ್ದತಿಗಳನ್ನು ಯಾರು ಕೂಡ ಕೇಳೋಕೆ ಸಂವಿಧಾನದಲ್ಲಿ ಹಕ್ಕಿಲ್ಲ. ಆದರೆ ಸಿಟಿ ರವಿಯವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಅಂತಾ ಬಹಳ ಸ್ಪಷ್ಟವಾಗಿ ಕಾಣಿಸುತ್ತೆ.ನೀವೂ ಮಾಡಿದಾಗ ಎಲ್ಲವೂ ಸರಿ. ಆದರೆ ಬೇರೆಯವರು ಮಾಡಿದರೆ ಹಿಂದೂ ಧರ್ಮದ ವಿರೋಧಿ ಅಂತಾ ಹೇಳ್ತೀರಲ್ಲ. ಹಾಗಾದರೆ ನೀವೇನೀಗಾ..?. ನೀವೂ ಒಪ್ಕೊಂಡಿದ್ದೀರಲ್ಲ. ಮಾಂಸ ತಿಂದಿದ್ದು ಅಲ್ಲಿಗೆ ಹೋಗಿದ್ದು ನಿಜ ಅಂತಾ ಒಪ್ಪಿಕೊಂಡಿದ್ದೀರಲ್ಲ..?. ಇದು ಎರಡು ನಾಲಿಗೆ ಅನ್ನೋದಕ್ಕೆ ಸ್ಪಷ್ಟವಾದ ಉದಾಹರಣೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಸಿದ್ದರಾಮಯ್ಯನವರು ತಮ್ಮ ಬೆನ್ನನ್ನು ಒಮ್ಮೆ ತಿರುಗಿ ನೋಡಿಕೊಳ್ಳಲಿ: ಶೋಭಾ ಕರಂದ್ಲಾಜೆ