ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ, ದೇಶದ ದೊಡ್ಡ ಉದ್ಯಮಿಯೆಂದು ಹೆಸರು ಮಾಡಿದ ವಿ.ಜಿ.ಸಿದ್ಧಾರ್ಥ ಹೆಗಡೆ ಅವರು ಬದುಕಿ ಬರಬಹುದೆಂಬ ವಿಶ್ವಾಸ ಹುಸಿಯಾಗಿದೆ. ಇಂದು ಬೆಳಿಗ್ಗೆ ಶವ ತೇಲಿ ಬಂದಿದೆ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ಸಂತಾಪ ಸೂಚಿಸಿದ್ದಾರೆ.
ಸಿದ್ದಾರ್ಥ ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸುವಂತಹ ದೊಡ್ಡ ವ್ಯಕ್ತಿತ್ವವುಳ್ಳ ಉದ್ಯಮಿ. ಸಾವಿರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದಂತವರು ಇಂದು ತಮ್ಮ ಬದುಕನ್ನೇ ಕೊನೆಗೊಳಿಸಿಕೊಂಡಿದ್ದಾರೆ. ಇದನ್ನು ನಂಬಲು ಕೂಡ ಸಾಧ್ಯವಾಗುವುದಿಲ್ಲ. 1990-93ರ ದಿನಗಳಲ್ಲಿ ಪರಿಚಯವಾದ ನನಗೆ, ಬೆನ್ನು ತಟ್ಟಿ ರಾಜಕೀಯವಾಗಿ ಬೆಳೆಯುವುದಕ್ಕೆ ಬೆನ್ನೆಲುಬಾಗಿ ನಿಂತರು. ನೆರವು ನೀಡಿ, ವೈಯಕ್ತಿಕವಾಗಿ ಪ್ರೊಫೈಲ್ನ್ನು ಜೀವನದಲ್ಲಿ ಚೆನ್ನಾಗಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದರು. ನಿಮಗೆಲ್ಲಾ ಒಳ್ಳೆ ರಾಜಕೀಯ ಭವಿಷ್ಯವಿದೆ ಎಂದು ಪ್ರೋತ್ಸಾಹ ಕೊಡುತ್ತಿದ್ದರು. ಸಿದ್ದಾರ್ಥ ಅವರದು ಬಡವರಿಗೋಸ್ಕರ ಕೆಲಸ ಮಾಡುವ ವ್ಯಕ್ತಿತ್ವ. ನಾನು ಫೋನ್ ಮಾಡಿ ಯಾರಿಗಾದರೂ ಕೆಲಸ ಕೊಡಿ ಎಂದು ಕೇಳಿದರೆ ಅವರು ಬಡವರಾ, ರಿಮೋಟ್ ವಿಲೇಜಾ ಎಂದು ಕೇಳಿ ಕೆಲಸ ನೀಡುತ್ತಿದ್ದರು. ಬಡವರಿಗೆ ಉದ್ಯೋಗ ಕೊಟ್ಟು ಆಶ್ರಯವಾಗಿ ನಿಂತು ಸಹಾಯ ಮಾಡುತ್ತಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಅವರು ಇನ್ನಿಲ್ಲ ಎಂದು ತಿಳಿದರೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಘಟನೆ ನಮಗೆಲ್ಲ ಆಶ್ಚರ್ಯ ಹಾಗೂ ಆಘಾತದ ಸಂಗತಿಯಾಗಿದೆ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಸಂತಾಪ ಸಂದೇಶದ ಮೂಲಕ ಕೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವರೇ ಸಂಘಟಿಸಿದ ಕಾರ್ಯಕ್ರಮಗಳಲ್ಲಿ ನಮ್ಮನ್ನೆಲ್ಲಾ ವೇದಿಕೆ ಮೇಲೆ ಕೂರಿಸಿ ಅವರು ಪ್ರೇಕ್ಷಕರ ಸಾಲಿನಲ್ಲಿ ಕೂತು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಅವರ ತಂದೆ-ತಾಯಿಯವರ ಹೆಸರಿನಲ್ಲಿ ಉಚಿತ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಅದರ ಶಂಕುಸ್ಥಾಪನೆಗೆ ನನ್ನನ್ನೂ ಆಹ್ವಾನಿಸಿದ್ದರು. ಆಗ ಅವರನ್ನು ವಿಚಾರಿಸಿದಾಗ ಈ ಆಸ್ಪತ್ರೆಯು ಕ್ಯಾಶ್ ಕೌಂಟರ್ಲೆಸ್ ಆಗಿರುತ್ತದೆ. ಕಿಡ್ನಿ, ಹೃದಯ ಮುಂತಾದ ಕಾಯಿಲೆಗಳಿಂದ ಬಳಲುವ ಬಡವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಉಚಿತವಾಗಿ ಐ.ಎ.ಎಸ್ ಮತ್ತು ಐ.ಪಿ.ಎಸ್ ತರಬೇತಿ ಕೇಂದ್ರಗಳನ್ನು ತೆರೆಯಲು ಕಟ್ಟಡ ಪ್ರಾರಂಭಿಸಿದ್ದರು. ಹೀಗೆ ದೂರದೃಷ್ಟಿ ಹೊಂದಿದ್ದ ಇವರು ನಮ್ಮ ಭಾಗದ ಜನರಿಗೆ ಒಳ್ಳೆಯ ಅವಕಾಶ ನೀಡಿದ್ದಾರೆ. ಇಂದು ನಮ್ಮನ್ನು ಬಿಟ್ಟು ಅವರು ಅಗಲಿದ್ದು ನಂಬಲು ಸಾಧ್ಯವಿಲ್ಲ. ಸಾವಿರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದ ಇವರ ಕನಸಿನ ಕಾಫಿ ಡೇ ಮುಂದುವರಿಯಲಿ. ವಿಧಿವಶರಾದ ವಿ.ಜಿ.ಸಿದ್ದಾರ್ಥ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ ಹೆಚ್.ಡಿ.ಕುಮಾರಸ್ವಾಮಿ ಹೆಚ್ಡಿಕೆ ಟ್ವೀಟ್: ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ದಾರ್ಥ್ ಅವರ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ 25 ವರ್ಷಗಳ ಸ್ನೇಹಿತ ಸಿದ್ದಾರ್ಥ್ ಅವರು ಕರ್ನಾಟಕದ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಸಹಸ್ರಾರು ಜನರಿಗೆ ತಮ್ಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿದ್ದರು ಎಂದಿದ್ದಾರೆ. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ನರನ್ನು ಕಳೆದುಕೊಂಡಿದೆ ಎಂದು ಕುಮಾರಸ್ವಾಮಿ ಟ್ವೀಟ್ನಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ ಡಿ.ವಿ.ಸದಾನಂದಗೌಡ ಡಿ.ವಿ.ಸದಾನಂದಗೌಡ ಟ್ವೀಟ್:ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ, ಕಾಫಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ಅವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ, ನಂಬಲಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ. ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.