ಬೆಂಗಳೂರು : ವಿಧಾನಸೌಧದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದು, ಕ್ಷಣಕಾಲ ತಬ್ಬಿಬ್ಬಾದ ಘಟನೆ ನಡೆದಿದೆ.
ಸಿದ್ದರಾಮಯ್ಯ ವಿರುದ್ಧ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸಿಟಿ ರವಿ ವಾಗ್ದಾಳಿ ನಡೆಸುತ್ತಿರುವ ಸಂದರ್ಭ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ಸಂದರ್ಭ ವರದಿಗಾರರು ಸರ್, ಸಿದ್ದರಾಮಯ್ಯ ನವರೇ ಬಂದ್ರು ಎಂದು ಹೇಳಿದಾಗ ಸಿಟಿ ರವಿ ತಬ್ಬಿಬ್ಬಾದರು. ಕೂಡಲೇ ಸಿ ಟಿ ರವಿ ತಮ್ಮ ಮಾತನ್ನು ನಿಲ್ಲಿಸಿ ಹಿಂದೆ ತಿರುಗಿ ನೋಡಿದರು.
ಸಿಟಿ ರವಿ ಬಯ್ಯುತ್ತಿರುವಾಗಲೇ ಸಿದ್ದರಾಮಯ್ಯ ಆಗಮನ.. ಕ್ಷಣ ಕಾಲ ತಬ್ಬಿಬ್ಬಾದ ಸಿಟಿ ರವಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ತಮ್ಮ ಹೇಳಿಕೆಗೆ ಸಮರ್ಥನೆ ನೀಡುತ್ತಿದ್ದ ಸಿ ಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರು. ಪ್ರಾಸಬದ್ದವಾಗಿ ಸಿ.ಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದಲ್ಲ. ಸಮಾಜವಾದಿಗಳ ಮಜವಾದಿತನ ನೋಡಿದ್ದೇನೆ. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸುತ್ತಿದ್ದರು.
ಈ ವೇಳೆ ಸಿದ್ದರಾಮಯ್ಯ ಆಗಮಿಸಿದ್ದು,ತಬ್ಬಿಬ್ಬಾದ ಸಿಟಿ ರವಿ ತಮ್ಮ ಮಾತಿನ ದಾಟಿಯನ್ನು ಬದಲಾಯಿಸಿದರು. ಜೊತೆಗೆ ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೇ ನಗುಮುಖದಿಂದ ತಡವರಿಸಿಕೊಂಡು ಮಾತು ಮುಂದುವರೆಸಿದರು. ಅತ್ತ ಸಿದ್ದರಾಮಯ್ಯ ಇತ್ತ ಕಡೆ ತಿರುಗದೇ ತಮ್ಮ ಪಾಡಿಗೆ ವಿಧಾನಸೌಧದ ಒಳಗಡೆ ತೆರಳಿದರು.
ಇದನ್ನೂ ಓದಿ :ಸಿದ್ದರಾಮಯ್ಯ-ಸಿಟಿ ರವಿ ನಡುವೆ ಮಾತಿನ ಚಕಮಕಿ!