ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕರಿಗೆ ಪಂಚ ಪ್ರಶ್ನೆಯನ್ನು ಕೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಟುಂಬ ಕಾನೂನಿಗಿಂತ ಅತೀತರೇ?. ಆ ರೀತಿ ಕಾನೂನಿಗಿಂತ ಅತೀತರಾಗಿದ್ದರೆ, ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಿದೆ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ನವರಿಗೆ ಮತ್ತು ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುವವರಿಗೆ ಪಂಚ ಪ್ರಶ್ನೆ ಕೇಳುತ್ತೇನೆ. ಅಸೋಸಿಯೇಷನ್ ಜನರಲ್ನಲ್ಲಿರುವ ಮೂಲ ಷೇರುದಾರರು ಎಷ್ಟು?, ಯಂಗ್ ಇಂಡಿಯಾದಲ್ಲಿರೋ ಪಾಲುದಾರರು ಎಷ್ಟು.?. ಅಲ್ಲಿ ಷೇರುದಾರರು, ಇಲ್ಲಿ ಪಾಲುದಾರರು ಎಷ್ಟು? ಎಂದು ಪ್ರಶ್ನೆ ಕೇಳಿದ್ದಾರೆ.
ಎಜೆಎಲ್ ಆರಂಭವಾದಾಗ ಆರಂಭದಲ್ಲಿ ಐದೂವರೆ ಸಾವಿರ ಷೇರುದಾರರಿದ್ದರು. ಯಂಗ್ ಇಂಡಿಯಾಗೆ ವರ್ಗಾವಣೆ ಮಾಡುವಾಗ ಇದ್ದದ್ದು 1,500. ಇಲ್ಲಿ ವರ್ಗಾವಣೆಯಾದಾಗ ನಾಲ್ಕು ಜನ ಪಾಲುದಾರರಿದ್ದಾರೆ. ಸೋನಿಯಾ 38%, ರಾಹುಲ್ 38%, ಮೋತಿಲಾಲ್ ಓರಾ, ಆಸ್ಕರ್ ಫರ್ನಾಂಡೀಸ್. ಮೋತಿಲಾಲ್ ಓರಾ, ಫರ್ನಾಂಡಿಸ್ ನಿಧನರಾಗಿದ್ದಾರೆ. ಪ್ರೈವೆಟ್ ಕಂಪನಿಗೆ ವರ್ಗಾವಣೆ ಮಾಡುವಾಗ ಕಾನೂನಿನಲ್ಲಿ ಅಧಿಕಾರವಿದೆಯಾ.? ವರ್ಗಾವಣೆ ಮಾಡುವಾಗ ಮೂಲ ಶೇರುದಾರರ ಅನುಮತಿ ಇದೆಯಾ?. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾವಣೆ ಮಾಡುವಾಗ ಎಜೆಎಲ್ ಕಂಪನಿಯ ಸಾಲ ಎಷ್ಟಿತ್ತು. ಸಬ್ ರಿಜಿಸ್ಟ್ರಾರ್ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿಯನ್ನು ಅಸೆಸ್ ಮಾಡದೆ ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ? ಎಂದು ಕೇಳಿದ್ದಾರೆ.
ನಾವೇಕೆ ಟಾರ್ಗೆಟ್ ಮಾಡಬೇಕು: ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ, ಭಯಭೀತರಾಗಿದ್ದಾರೆ ಎನ್ನುವ ಆರೋಪ ರಾಜ್ಯ ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ. ಟಾರ್ಗೆಟ್ ಮಾಡುವ ಅವಶ್ಯಕತೆ ಏನಿದೆ. ನಿಮ್ಮ ನಾಯಕರು ಕಾಲಿಟ್ಟ ಕಡೆಯಲ್ಲೆಲ್ಲ ನಿಮ್ಮ ಪಕ್ಷ ಸೋತಿದೆ. ನಾವ್ಯಾಕೆ ಟಾರ್ಗೆಟ್ ಮಾಡಬೇಕು?. ಉತ್ತರ ಪ್ರದೇಶ ಚುನಾವಣೆಯಲ್ಲಿ 399 ಕ್ಷೇತ್ರದಲ್ಲಿ ಸ್ಪರ್ಧಿಸಿ, 387 ಸ್ಥಾನದಲ್ಲಿ ಠೇವಣಿ ಕಳೆದುಕೊಂಡಿದ್ದೀರಿ ಎಂದು ಟೀಕಿಸಿದರು.