ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಬಂದು ಒಂದು ತಿಂಗಳು ಕಳೆದಿದೆ. ಈ ಸರ್ಕಾರ ಹಗರಣಗಳ ಮೂಲಕವೇ ಮುನ್ನುಡಿ ಬರೆದಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು. ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ತಿಂಗಳಲ್ಲೇ ಜನರು ಈ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಈ ಸರ್ಕಾರ ವಿಶ್ವಾಸಾರ್ಹತೆ ಕಳಕೊಂಡಿದೆ. ಇವತ್ತು ಚುನಾವಣೆ ನಡೆದರೆ ಮತ್ತೆ ಈ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಸಚಿವ ಸಂಪುಟದ ಅರ್ಧದಷ್ಟು ಸದಸ್ಯರೇ ಸೋಲುತ್ತಾರೆ. ಮತ ಹಾಕಿದವರು ಹಾದಿಬೀದಿಯಲ್ಲಿ ಈ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದರು.
ಸುಳ್ಳು ಆರೋಪಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದರೆ, ಬೆಟ್ಟ ಅಗೆದರೆ ಏನು ಸಿಗುತ್ತದೆ?. ಇಲಿನೂ ಸಿಗೋಲ್ಲ. ನಮ್ಮ ಆಡಳಿತಾವಧಿಯಲ್ಲಿ ಹಗರಣ ನಡೆದಿದ್ದರೆ ನಾವು ಭಯ ಪಡಬೇಕು. ಸುಳ್ಳು ಆರೋಪ ಹೊರಿಸಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಒಂದು ವರ್ಷದ ಹಿಂದೆ ಒಂದು ದೂರು ದಾಖಲಿಸಿದ್ದರು. ಇವತ್ತಿನವರೆಗೂ ಹಣ ಕೊಟ್ಟವರು ಯಾರು?. ತಗೊಂಡವರು ಯಾರೆಂದು ತಿಳಿಸಿಲ್ಲ. ಸಾಕ್ಷ್ಯಾಧಾರ ಒದಗಿಸಿಲ್ಲ ಎಂದು ಹೇಳಿದರು.
ಈ ಸರ್ಕಾರಕ್ಕೆ ವಿಶ್ವಾಸಾರ್ಹತೆ ಇದ್ದರೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಮಂಡಿಸಲಿ. ಸಿದ್ದರಾಮಯ್ಯರ ಹಿಂದಿನ ಸರ್ಕಾರ ಅವರನ್ನು ನೇಮಿಸಿತ್ತು. ಕಂಟ್ರಾಕ್ಟರ್ ಕೆಂಪಣ್ಣನ ಮೇಲೆ ನಂಬಿಕೆ ಇಡುವ ಅವರಿಗೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಮೇಲೆ ನಂಬಿಕೆ ಇರಬೇಕಲ್ಲವೇ?. ಆಯೋಗದ ವರದಿಯನ್ನು ಆಧರಿಸಿ ಎಫ್‍ಐಆರ್ ಬುಕ್ ಮಾಡಲಿ. 8 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗಿದೆ ಎಂದು ವರದಿ ತಿಳಿಸಿದೆ. ಇದ್ದವರು ಮೂರು ಜನ, ಕದ್ದವರು ಯಾರು? ಕಂಟ್ರಾಕ್ಟರ್ಗೆ ವೈಯಕ್ತಿಕ ಹಿತಾಸಕ್ತಿ ಇರಬಹುದು. ನ್ಯಾಯಮೂರ್ತಿಗಳಿಗೆ ಹಾಗಿರಲು ಸಾಧ್ಯವಿಲ್ಲ. ಆದ್ದರಿಂದ ವರದಿ ಮಂಡಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.