ಬೆಂಗಳೂರು: "ಬಿಬಿಎಂಪಿ ಅಕ್ರಮ ಸಂಬಂಧ ಎಸ್ಐಟಿ ರಚನೆ ಮಾಡಿರೋದೇ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ" ಎಂದು ಮಾಜಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ. ಬೆಂಗಳೂರಲ್ಲಿಂದು ಮಾತನಾಡಿದ ಅವರು, "40% ಪರ್ಸೆಂಟ್ ಕಮಿಷನ್ ಅಂತ ನಮ್ಮ ಮೇಲೆ ಆರೋಪ ಮಾಡಿದ್ರಿ. ನೀವು ಪ್ರಾಮಾಣಿಕರಿದ್ರೆ ಹಣ ಬಿಡುಗಡೆ ಮಾಡಿ. ಇಷ್ಟು ದಿನದಲ್ಲಿ ತನಿಖೆ ಮಾಡಿ ವರದಿ ಕೊಡಿ ಅಂತ ಹೇಳಿ. ಅದರ ಮೇಲೆ ಹಣ ಬಿಡುಗಡೆ ಮಾಡಿ. ಡಿಕೆಶಿ ಅವರನ್ನ ಹೆದರಿಸಲು ಸಾಧ್ಯವಿಲ್ಲ, ಅವರೇ ಬೇರೆಯವರನ್ನು ಹೆದರಿಸೋರು. ಕಂಟ್ರಾಕ್ಟರ್ಸ್ರನ್ನು ಹೆದರಿಸೋ ಕೆಲಸ ಮಾಡಬೇಡಿ" ಎಂದರು.
ಕಂಟ್ರಾಕ್ಟರ್ಸ್ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಕಮಿಷನ್ ಕೇಳ್ತಿರೋದು ಸತ್ಯ ಅಂತ ನನಗೂ ಗೊತ್ತಾಗಿದೆ. ಜೊತೆಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಇವರು ಸರಿ ಇದ್ರೆ ಹಣ ಬಿಡುಗಡೆ ಮಾಡಲಿ. ಬಿಜೆಪಿ ಸರ್ಕಾರದಲ್ಲಿ ಜುಡಿಷಿಯರಿ ಕಮಿಟಿ ರಚನೆ ಮಾಡಿತ್ತು. ಕಾಮಗಾರಿ ನೀಡೋ ಮೊದಲು ಸರಿ ಇದೆಯಾ ಅಂತ ಪರಿಶೀಲನೆ ಮಾಡಲು ಕಮಿಟಿ ರಚನೆ ಮಾಡಲಾಗಿತ್ತು. ಇವರು ಅಧಿಕಾರಕ್ಕೆ ಬಂದ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ. ಹಳೆಯ ಬಿಲ್ಲಿಗೆ ಪರ್ಸೆಂಟೇಜ್ ಯಾಕೆ ಹೇಳ್ತಿದ್ದಾರೆ. ನಮ್ಮದೇ ಹಣಕ್ಕೆ ಕಮಿಷನ್ ಕೇಳ್ತಿದ್ದಾರೆ ಅನ್ನೋದು ಅವರ ಆರೋಪ. ಭ್ರಷ್ಟಾಚಾರದ ಪರಾಕಾಷ್ಠೆಗೆ ತಲುಪಿದೆ" ಎಂದು ಆರೋಪಿಸಿದರು.
ಕಂಟ್ರಾಕ್ಟರ್ಗಳು ರಾಜ್ಯಪಾಲರ ಭೇಟಿ ವಿಚಾರವಾಗಿ ಮಾತನಾಡಿ, "ಹಳೆ ಬಿಲ್‌ಗಳಿಗೆ ಪರ್ಸೆಂಟೇಜ್ ಕೇಳುವ ಜತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗೂ ಇದೆ. ತಪ್ಪಾದ ಬಿಲ್ ಇದ್ದರೆ ಅದಕ್ಕೆ ಏನು ಕ್ರಮ ಕೈಗೊಂಡಿದ್ದಾರೆ?. ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆಯೇ ವಿನಃ ವ್ಯವಸ್ಥೆ ರೂಪಿಸಿಲ್ಲ. ಐದು ವರ್ಷದ ಹಿಂದಿನದ್ದಕ್ಕೂ ಪರ್ಸೆಂಟ್ ಕೊಡಬೇಕು ಎಂದು ಹೇಳುತ್ತಿದ್ದಾರಂತೆ. ಬಿಜೆಪಿ ಭ್ರಷ್ಟ ಎಂದವರು ಮೊದಲ ದಿನದಿಂದಲೇ ಅಸಲಿರೂಪ ತೋರಿಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಪತ್ರವೇ ನಕಲಿ ಎನ್ನುತ್ತಾರೆ. ಹಾಗಾದರೆ ಕಂಟ್ರಾಕ್ಟರ್ಗಳು ಕುಮಾರಸ್ವಾಮಿ ಭೇಟಿ ಮಾಡಿದ್ದೂ ಸುಳ್ಳಾ" ಎಂದು ಪ್ರಶ್ನಿಸಿದರು.