ಬೆಂಗಳೂರು:ರಾಜ್ಯದ ಪ್ರಾಥಮಿಕ ಆರೋಗ್ಯ ಬಲಪಡಿಸಲು ಸಿಎಸ್ಆರ್ ಅನ್ನು ಸರ್ಕಾರ ಬಳಸಿಕೊಳ್ಳಲಾಗುತ್ತಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಹೇಳಿದರು.
ರಾಜ್ಯದ ಪ್ರಾಥಮಿಕ ಆರೋಗ್ಯ ಬಲಪಡಿಸಲು ಸಿಎಸ್ಆರ್ ಬಳಸಿಕೊಳ್ಳಲಾಗುತ್ತಿದೆ ಎಂದ ಸಿಎಂ ವಿಧಾನಸೌಧ ಮುಂಭಾಗ ಲಯನ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರಿ ರಕ್ತ ಸಂಗ್ರಹಣಾ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ರಕ್ತ ಸಂಗ್ರಹ ಮತ್ತು ಸಾಗಣೆ ವಾಹನಕ್ಕೆ ಚಾಲನೆ ನೀಡುತ್ತಿದ್ದೇನೆ ಎಂದರು.
ರಾಜ್ಯದ ವೈದ್ಯಕೀಯ ಕ್ಷೇತ್ರ ಬಲಪಡಿಸಲು ಖಾಸಗಿ ಸಂಸ್ಥೆಗಳು ಸಹಕಾರ ನೀಡುತ್ತಿವೆ. ರಕ್ತ ದಾನ ಮಾಡಲು ಎಲ್ಲರೂ ಮುಂದಾಗಬೇಕು. 2019-20 ರಲ್ಲಿ ಶೇ. 100 ರಷ್ಟು ಗುರಿ ತಲುಪಲಾಗಿತ್ತು. ಆದರೆ, 20-21 ರಲ್ಲಿ ಈ ಗುರಿ ತಲುಪಲಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ರಕ್ತದಾನ ಮಹಾದಾನ. ಕೋವಿಡ್ ಸಂದರ್ಭದಲ್ಲಿ ರಕ್ತದಾನ ಕಡಿಮೆ ಆಗಿದೆ. ಈ ಸಂದರ್ಭದಲ್ಲಿ ಲಯನ್ಸ್ ರಕ್ತ ಸಂಗ್ರಹಣೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
4 ಕೋಟಿ ಯುನಿಟ್ ರಕ್ತ ಸಂಗ್ರಹ ನಮ್ಮ ದೇಶದಲ್ಲಿ ಕಡಿಮೆಯಾಗಿದೆ. ನಮ್ಮ ರಾಜ್ಯದ ಪ್ರತಿಯೊಬ್ಬರು ಒಂದು ಯುನಿಟ್ ರಕ್ತ ಕೊಟ್ರೆ ಹೆಚ್ಚಿನ ರಕ್ತ ಸಂಗ್ರಹ ಮಾಡಬಹುದು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಎಲ್ಲರೂ ಸೇರಿ ಅದನ್ನ ನಿಯಂತ್ರಣ ಮಾಡುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಕ್ತದಾನದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಲಯನ್ಸ್ ಸಂಸ್ಥೆ ಮುಖ್ಯಸ್ಥರು, ಸರ್ಕಾರದ ಅಧಿಕಾರಿಗಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.