ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯ ನೌಕರರ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಸೌಜನ್ಯ ಭೇಟಿ ಮಾಡಿ, ಸಮಗ್ರ ಮಾಹಿತಿ ಪಡೆಯಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ, ಜಂಟಿ ಆಯುಕ್ತ (ಕಂದಾಯ) ವೆಂಕಟಚಲಪತಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಭೇಟಿ ಮಾಡಿ ಸಮಸ್ಯೆಗಳನ್ನು ಅಲಿಸಿದರು.
ಭೇಟಿಯ ಬಳಿಕ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಸಂಚಲನ ಮೂಡಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿಗಳು ಆತಂಕ ಮತ್ತು ಖಿನ್ನತೆಗೆ ಒಳಗಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಚಿಲುಮೆ ಸಂಸ್ಥೆ ಜನಜಾಗೃತಿ ಕೆಲಸ ಮಾಡಬೇಕಾಗಿತ್ತು. ಆದರೆ, ಆ ಸಂಸ್ಥೆಯಿಂದ ಇಂದು ವಂಚನೆ ಮಾಡಿದೆ. ರಾಜ್ಯದಲ್ಲಿ 2 ಲಕ್ಷ 60 ಸಾವಿರ ಹುದ್ದೆ ಖಾಲಿ ಇದೆ. ಸಿಬ್ಬಂದಿ ಕೊರತೆಯಿಂದ ಒತ್ತಡ, ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಚಿಲುಮೆ ಸಂಸ್ಥೆಯವರು ತಮ್ಮ ಸಿಬ್ಬಂದಿಗಳಿಗೆ ಕಾರ್ಡ್ ಮಾಡಿಕೊಟ್ಟಿದ್ದಾರೆ.
ಹೀಗಾಗಿ ಸರ್ಕಾರ ಈಗಾಲಾದರೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಮತದಾರರ ದತ್ತಾಂಶ ಕಳವು ನಮ್ಮ ಬಿಬಿಎಂಪಿ ಸಿಬ್ಬಂದಿ ಅಥವಾ ಅಧಿಕಾರಿಗಳಿಂದ ಆಗುವುದಿಲ್ಲ. ಕೇಂದ್ರ ಚುನಾವಣೆ ಆಯೋಗದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಿಬ್ಬಂದಿಯ ಪಾತ್ರ ಇಲ್ಲ ಎಂದು ಹೇಳಿದರು.
ಮತದಾರರ ಪಟ್ಟಿಯೂ ಆನ್ ಲೈನ್ ನಲ್ಲಿ ಲಭ್ಯವಿದೆ:ಮತದಾರರ ಪಟ್ಟಿಯೂ ಆನ್ ಲೈನ್ ನಲ್ಲೇ ಲಭ್ಯವಿದೆ. ಇದನ್ನು ಯಾರು ಬೇಕಾದರೂ ನೋಡಬಹುದಾಗಿದೆ. ಹೀಗಿರುವಾಗ, ಯಾವುದೇ ಅಕ್ರಮ ಮಾಡಲು ಹೇಗೆ ಸಾಧ್ಯ ಎಂದು ಹೇಳಿದರು.
ಧೈರ್ಯ ತುಂಬಿರುವುದು ಸಂತಸ ತಂದಿದೆ: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ ಅಮೃತ್ ರಾಜ್ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳು,ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ ಎಂದು ಹೇಳಿದರು.
ಮಾನಸಿಕವಾಗಿ ಹಿಂಸೆ ನೀಡಬಾರದು: ಇನ್ನೂ, ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು ಸಿಇಒ ನಡೆಸುವ ತನಿಖೆಗೆ ಸಿದ್ದವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಎಂದು ಮನವಿ ಮಾಡಿದರು.