ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸಲು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಅನ್‌ಲಾಕ್ -1 ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಿಸಿರುವುದರಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಹಾಗೂ ಅಂತರ್ ರಾಜ್ಯ ವ್ಯಕ್ತಿಗಳ ಚಲನವಲನ ಹೆಚ್ಚುತ್ತಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಿಸುವ ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳು ಹೆಚ್ಚಿಗೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆ ಕೆಲ ನಿರ್ದೇಶನಗಳನ್ನು ಹೊರಡಿಸಲಾಗಿದೆ.
ಒಂದೇ ಕಾರ್ಯಪಡೆ ರಚನೆ:
ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳು ಮತ್ತು ಬೆಂಗಳೂರು (ನಗರ) ಮತ್ತು ಬೆಂಗಳೂರು (ಗ್ರಾಮೀಣ) ಜಿಲ್ಲೆಗಳ ಎಲ್ಲಾ ತಾಲೂಕುಗಳನ್ನು ಒಳಗೊಂಡ ಬೆಂಗಳೂರು ನಗರ ವಿಸ್ತೃತ ಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ನಿಯಂತ್ರಿಸುವ ಉದ್ದೇಶಕ್ಕೆ ಒಂದೇ ಕಾರ್ಯಪಡೆ ರಚಿಸಲು ಆದೇಶಿಸಲಾಗಿದೆ. ಬಿಬಿಎಂಪಿ ಆಯುಕ್ತರು ಈ ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿರುವ ಎಲ್ಲಾ ಸಿಬ್ಬಂದಿ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ನಿಯಂತ್ರಿಸಲು ಹಾಗೂ ತಾಯಿ ಹಾಗೂ ಮಕ್ಕಳ ಆರೋಗ್ಯ (ಎಂಸಿಎಚ್) ಕಾರ್ಯಕ್ರಮದ ಅನುಷ್ಠಾನಕ್ಕೆ ಬಿಬಿಎಂಪಿ ಆಯುಕ್ತರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ.