ಬೆಂಗಳೂರು:ರಾಜ್ಯದ ಜನರಿಗೆ ಅನುಕೂಲ ಕಲ್ಪಿಸಲು ಆರಂಭ ಮಾಡಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ನಾಲ್ಕೂ ಸಂಸ್ಥೆಗಳು 2015ರಿಂದ 2021ರವರೆಗೆ 4,689.09 ಕೋಟಿ ರೂ.ನಷ್ಟು ನಷ್ಟ ಅನುಭವಿಸಿದೆ ಎಂಬುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ 2016-2021ರ ಅವಧಿಯ ಭಾರತೀಯ ಲೆಕ್ಕ ಪರಿಶೋಧಕರ ವರದಿ (ಸಿಎಜಿ) ವರದಿಯನ್ನು ಮಂಡಿಸಿದರು.
ಸಿಎಜಿ ವರದಿಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಈ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಇದುವರೆಗೆ 659 ಕೋಟಿಯಷ್ಟು ಹಣಕಾಸು ನೆರವು ನೀಡಿದೆ. ಆದರೂ ಆರು ವರ್ಷಗಳ ಅವಧಿಯಲ್ಲಿ ಲಾಭದ ಬದಲಾಗಿ 4 ಸಾವಿರ ಕೋಟಿಗೂ ಮೀರಿದ ನಷ್ಟವನ್ನು ಅನುಭವಿಸಿವೆ ಎಂದು ಹೇಳಿದೆ.
ಕರ್ನಾಟಕದ ಮೊದಲ ಬಿಆರ್ಟಿಎಸ್ ಹುಬ್ಬಳ್ಳಿ ಧಾರವಾಡದ ನಡುವೆ ಕಾರ್ಯಾಚರಣೆ ಆರಂಭಿಸಿದ ನಂತರ 5.69 ಕೋಟಿ ರೂ. ನಷ್ಟವನ್ನು ಅನುಭವಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಿಆರ್ಟಿಎಸ್ ವಿಲೀನ ಮಾಡಿ, ಪ್ರಾರಂಭಿಕ ಪ್ರೋತ್ಸಾಹ ಧನವಾಗಿ 35 ಕೋಟಿ ರೂ.ವನ್ನು ಸರ್ಕಾರ ನೀಡಿತ್ತು. ಆದರೆ, ಉತ್ತಮ ದರ್ಜೆಯ ಹವಾನಿಯಂತ್ರಿತ ಬಸ್ಸುಗಳಿಗೆ ಸಾಮಾನ್ಯ ಬಸ್ಗಳ ದರವನ್ನು ಅಳವಡಿಕೆ ಮಾಡಿಕೊಂಡಿದ್ದೇ ರಾಜ್ಯದ ಈ ಪ್ರತಿಷ್ಠಿತ ಸಾರಿಗೆ ಸಂಸ್ಥೆ ನಷ್ಟ ಅನುಭವಿಸಲು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು: ಬಿಎಂಟಿಸಿ 2015-16ರಲ್ಲಿ ಲಾಭದಲ್ಲಿತ್ತು. ನಂತರದಲ್ಲಿ ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದೆ. ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಬಸ್ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 170.31 ಕೋಟಿ ರೂ. ಬಳಕೆ ಮಾಡಿಕೊಳ್ಳದೇ ನಷ್ಟ ಮಾಡಿಕೊಳ್ಳಲಾಯಿತು. ರಾಜಧಾನಿಯ ನಾಗರಿಕರಿಗೆ ವಾಯುಮಾಲಿನ್ಯ ಸಹನೀವಾಗಿಸಿಕೊಳ್ಳುವ ಅವಕಾಶ ಲಭಿಸಲಿಲ್ಲ ಎಂದು ವರದಿ ಪ್ರಸ್ತಾಪಿಸಿದೆ.
ರಾಜ್ಯದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುವುದಕ್ಕೆ ಇಂಧನ ಬೆಲೆ ಹೆಚ್ಚಳ, ಪಾಸ್ ಇತ್ಯಾದಿ ರಿಯಾಯಿತಿಗಳು ಕೂಡ ಕಾರಣ. ಕೈಗಾರಿಕಾ ವಲಯದಲ್ಲಿ ಆಡಳಿತಾತ್ಮಕ ಲೋಪದಿಂದ ಖಜಾನೆಗೆ ನಷ್ಟವಾಗಿದೆ. 2.04 ಕೋಟಿ ರೂ.ನಷ್ಟು ಹೆಚ್ಚುವರಿ (ಅನರ್ಹ) ಲಾಭವನ್ನು ಮಾಡಿಕೊಡಲಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ವರದಿ ಶಿಫಾರಸು ಮಾಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಲೋಪಗಳನ್ನೂ ವರದಿ ಗುರುತಿಸಿದೆ. ಹಾಲಿ ನಿಯಮಗಳು, ನಿಯಂತ್ರಣ ಪ್ರಾಧಿಕಾರಗಳು ಹಾಗೂ ನ್ಯಾಯಾಲಯಗಳ ಆದೇಶಗಳನ್ನು ಕಡೆಗಣಿಸಿ ಹೊಸ ಬಡಾವಣೆಗಳಿಗೆ ನೀಡುವಂತಹ ಪರಿಹಾರವನ್ನು ಹಳೆಯ ಬಡಾವಣೆಗಳ ಭೂ ಮಾಲೀಕರಿಗೂ (ಭೂ ಸ್ವಾಧೀನ ಸಂದರ್ಭದಲ್ಲಿ) ನೀಡಿರುವುದರಿಂದ 29.85 ಕೋಟಿ ರೂ.ನಷ್ಟು ಹೆಚ್ಚಿನ ಪಾವತಿ ಈ ಸಂಸ್ಥೆಯಿಂದ ಆಗಿದೆ. ಇದು ಪ್ರಾಧಿಕಾರಕ್ಕೆ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳಿದೆ. ಹೀಗಾಗಿ ಸಂಬಂಧಿಸಿದ ಬಿಡಿಎ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿದೆ.