ಕರ್ನಾಟಕ

karnataka

ETV Bharat / state

ಸಚಿವಾಲಯದ ಕಾರು ಬಳಸಿ ಸುಮಾರು ಕೋಟಿ  ರೂ.ವಂಚನೆ: ಆರೋಪ ಮುಕ್ತಿಗೊಳಿಸಲು ಹೈಕೋರ್ಟ್ ನಿರಾಕರಣೆ - ಈಟಿವಿ ಭಾರತ ಕನ್ನಡ

ಶಾಸಕರ ಭವನದ ಕಾರು ಬಳಸಿ 100 ಕೋಟಿ ಸಾಲ ಕೊಡಿಸುವುದಾಗಿ 1 ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 13ನೇ ಆರೋಪಿಯನ್ನು ದೋಷಮುಕ್ತಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

High Court
ಹೈಕೋರ್ಟ್

By

Published : Nov 21, 2022, 3:41 PM IST

ಬೆಂಗಳೂರು: ಶಾಸಕರ ಭವನದ ಕಾರು ಚಾಲಕನಾಗಿದ್ದು, ಸಚಿವಾಲಯದ ಕಾರನ್ನು ದುರ್ಬಳಕೆ ಮಾಡಿಕೊಂಡು ವ್ಯಕ್ತಿಯೊಬ್ಬರಿಗೆ 100 ಕೋಟಿ ಸಾಲ ಕೊಡಿಸುವುದಾಗಿ 1 ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದೋಷಮುಕ್ತಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ವಂಚನೆ ಆರೋಪದಲ್ಲಿ ತಮ್ಮನ್ನು ಆರೋಪಿಯನ್ನಾಗಿಸಿ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ನಗರದ ಅರಮನೆ ಗುಟ್ಟಹಳ್ಳಿಯ ನಿವಾಸಿ ಬಿ.ಎಂ. ಸತೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಪ್ರಕರಣ ರದ್ದು ಪಡಿಸುವುದಕ್ಕೆ ನಿರಾಕರಿಸಿದೆ.

ಅಲ್ಲದೇ, ಪ್ರಕರಣ ಸಂಬಂಧ ತನಿಖೆ ನಡೆಸಿರುವ ಪೊಲೀಸರು, ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಅರ್ಜಿದಾರರನ್ನು 13ನೇ ಆರೋಪಿ ಎಂದು ಗುರುತಿಸಿದ್ದಾರೆ. ಅಲ್ಲದೇ, ಆರೋಪಿಯೇ ದೂರುದಾರರನ್ನು(ಸಾಲ ಪಡೆಯಲು) ಕರೆದುಕೊಂಡು ಹೋಗಿದ್ದಾರೆ. ಶಾಸಕರ ಭವನದ ಕಾರು ಚಾಲಕನಾಗಿದ್ದು, ತಾನು ಮಾಡುವ ಅಕ್ರಮ ಚಟುವಟಿಕೆಗಳಿಗೆ ಸಚಿವಾಲಯಕ್ಕೆ ಸೇರಿದ ಕಾರನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತ ಆರೋಪ ಪುಷ್ಟಿಕರಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಜತೆಗೆ, ಯಾವುದೇ ಪುರಾವೆಗಳೂ ಇಲ್ಲ. ಪ್ರಕರಣದ ಮತ್ತೊಬ್ಬರ ಸೂಚನೆ ಮೇರೆಗೆ ದೂರುದಾರರನ್ನು ನಗರದ ಒಬೆರಾಯ್ ಹೋಟೆಲ್‌ನಿಂದ ವಿಧಾನಸೌಧದವರೆಗೂ ಕರೆ ತಂದಿದ್ದರು. ಇದನ್ನು ಹೊರತುಪಡಿಸಿ ಯಾವುದೇ ಆರೋಪಗಳು ಅರ್ಜಿದಾರರ ವಿರುದ್ಧ ಇಲ್ಲ. ತನಿಖಾಧಿಕಾರಿಗಳು ದುರುದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ಪ್ರಕರಣದಿಂದ ತಮ್ಮ ಕಕ್ಷಿದಾರರನ್ನು ಮುಕ್ತಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ:ತಮಿಳುನಾಡಿನ ಕೊಯಮುತ್ತೂರು ಮೂಲದ ಎಸ್. ಇಂದಿರಾ ಎಂಬುವರಿಗೆ ಪರಿಚಯವಾಗಿದ್ದ ರಮೇಶ್ ಎಂಬುವರ ಮೂಲಕ ಆಂಧ್ರಪ್ರದೇಶದ ಇಳಮದಿರ ಎಂಬುವರು ಪರಿಚಯವಾಗಿದ್ದರು. ಬಳಿಕ ಗೋಡಂಬಿ ಮಾರಾಟದ ವ್ಯವಹಾರಕ್ಕಾಗಿ ಬ್ಯಾಂಕ್ ಇಲ್ಲವೇ, ಹಣಕಾಸು ಸಂಸ್ಥೆಗಳಿಂದ 100 ಕೋಟಿ ರೂ. ಸಾಲ ಕೊಡಿಸುವುದಾಗಿ ತಿಳಿಸಿದ್ದರು. ಇದಕ್ಕಾಗಿ ವಿಧಾನಸೌಧದ ಒಂದನೇ ಮಹಡಿಯಲ್ಲಿ ಚರ್ಚೆಯನ್ನು ನಡೆಸಿದ್ದರು.

ಅಲ್ಲದೇ, ಒಟ್ಟು ಸಾಲದ ಮೊತ್ತಕ್ಕೆ ಶೇ. 1.2 ರಷ್ಟು ಸ್ಟ್ಯಾಂಪ್ ಡ್ಯೂಟಿಗಾಗಿ ಮುಂಗಡವಾಗಿ ನೀಡಬೇಕು ಎಂದು ತಿಳಿಸಿ 1 ಕೋಟಿ 12 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ಬಳಿಕ ಹಣ ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದರು. ಈ ಸಂಬಂಧ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ದೂರುದಾರರು ಮನವಿ ಮಾಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರನ್ನು ಆರೋಪ ಪಟ್ಟಿಯಲ್ಲಿ 13ನೇ ಆರೋಪಿಯನ್ನಾಗಿಸಿದ್ದರು.

ಇದನ್ನೂ ಓದಿ:ಓಲಾ, ಉಬರ್ ಆಟೋ ಸೇವೆ ಬಗ್ಗೆ ನ. 25ರೊಳಗೆ ನಿರ್ಧಾರ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

ABOUT THE AUTHOR

...view details