ಬೆಂಗಳೂರು : ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರ ಮನವಿಯ ಮೇರೆಗೆ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ನೆಟೆರೋಗ ಸಂತ್ರಸ್ತರಿಗೆ ಪಾವತಿಸಲು ಬಾಕಿ ಇದ್ದ ರೂ. 74.67 ಕೋಟಿ ರೂ. ಹಣ ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾದ ಬೆಳೆಯ ಪರಿಹಾರ ಪಾವತಿಗೆ ರೂ. 233 ಕೋಟಿ ಅನುದಾನ ಮೀಸಲಿರಿಸಿ ಆದೇಶ ಹೊರಡಿಸಿತ್ತು.
ಈಗಾಗಲೇ ಎರಡು ಕಂತುಗಳಲ್ಲಿ ಒಟ್ಟು ರೂ. 148.33 ಕೋಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಸಲುವಾಗಿ ಬಾಕಿ ಹಣವನ್ನೂ ಬಿಡುಗಡೆ ಮಾಡುವಂತೆ ಕೃಷಿ ಸಚಿವರು ಕೋರಿದ ಹಿನ್ನಲೆಯಲ್ಲಿ ಅಂತಿಮ ಕಂತಿನ ಅನುದಾನ ರೂ.74.67 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ನಾಲ್ಕು ಜಿಲ್ಲೆಗಳ ಅರ್ಹ ರೈತರ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಕೃಷಿ ಸಬಲೀಕರಣಕ್ಕೆ ನೆರವಾಗಿ : ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿ, ರೈತರನ್ನು ಸಬಲೀಕರಣಗೊಳಿಸಲು ಎಲ್ಲಾ ತಾಂತ್ರಿಕ, ವೈಜ್ಞಾನಿಕ ನೆರವನ್ನು ಪರಿಣಾಮಕಾರಿಯಾಗಿ ವರ್ಗಾವಣೆ ಮಾಡುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೂಚನೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಕೃಷಿ, ಜಲಾನಯನ ಇಲಾಖೆಗಳು, ವಿಶ್ವವಿದ್ಯಾನಿಲಯಗಳ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರೈತರಿಗೆ ವಿವಿಧ ಯೋಜನೆಗಳ ನೆರವಿನ ಜೊತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಕೃಷಿ ಸಚಿವರು ಅಭಿಪ್ರಾಯಪಟ್ಟರು.
ವಿಶ್ವ ವಿದ್ಯಾನಿಲಯಗಳು ರೈತರಿಗೆ ಆಪ್ತವಾಗಬೇಕು. ಕೃಷಿ ವಿಜ್ಞಾನಿಗಳನ್ನು ತಯಾರು ಮಾಡುವುದರ ಜೊತೆಯಲ್ಲಿ ಯಶಸ್ವಿ ಸಂಶೋಧನೆಗಳ ಫಲವನ್ನು ಸಕಾಲದಲ್ಲಿ ರೈತರಿಗೆ ತಲುಪಿಸಬೇಕು ಎಂದರು. ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಹಣ ಒದಗಿಸಬೇಕು. ಇದಕ್ಕೆ ಇಲಾಖಾ ಅಧಿಕಾರಿಗಳು ವಿಮಾ ಕಂಪನಿಗಳ ಜೊತೆ ಸಮನ್ವಯ ಮಾಡಿ ಕೃಷಿಕರಿಗೆ ನೆರವಾಗಿ ಎಂದರು.