ಕರ್ನಾಟಕ

karnataka

By

Published : Aug 2, 2021, 8:14 PM IST

Updated : Aug 2, 2021, 8:56 PM IST

ETV Bharat / state

ಬಿಎಸ್​ವೈ ವಿರುದ್ಧ ಭ್ರಷ್ಟಾಚಾರ ಆರೋಪ : ಹೈಕೋರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಕೆ

ಮಾಜಿ ಸಿಎಂ ಬಿ. ಎಸ್​. ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಮತ್ತು ಆಪ್ತರ ವಿರುದ್ಧದ ಖಾಸಗಿ ದೂರು ವಜಾಗೊಳಿಸಿ ಜನಪ್ರತಿನಿಧಿಗಳ ವಿಚಾರಣಾ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರ ಟಿ.ಜೆ. ಅಬ್ರಹಾಂ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದಿನ ಪಿಐಎಲ್​​ ಮತ್ತು ಈ ಕ್ರಿಮಿನಲ್​ ಅರ್ಜಿಯೊಂದಿಗೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ಸೂಚಿಸಿ ಹೈಕೋರ್ಟ್​​ ವಿಚಾರಣೆ ಮುಂದೂಡಿದೆ.

BSY Corruption case
ಮಾಜಿ ಸಿಎಂ ಬಿಎಸ್​ವೈ

ಬೆಂಗಳೂರು: ಭ್ರಷ್ಟಾಚಾರ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮತ್ತು ಆಪ್ತರ ವಿರುದ್ಧದ ಖಾಸಗಿ ದೂರನ್ನು ವಜಾಗೊಳಿಸಿರುವ ಜನಪ್ರತಿನಿಧಿಗಳ ವಿಚಾರಣಾ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರ ಟಿ.ಜೆ ಅಬ್ರಹಾಂ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಹಾಂ ಅವರು ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಹಾಗೂ ಖಾಸಗಿ ದೂರಿನಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿಯಲ್ಲಿ ತಿಳಿಸಿರುವ ಅಂಶಗಳ ಕುರಿತು ಮೊದಲಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ಕಳೆದ ಶನಿವಾರ ಆ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯ ಪೀಠ, ಅರ್ಜಿಯನ್ನು ತಕರಾರು ಅರ್ಜಿಯಾಗಿ ಮಾರ್ಪಡಿಸಿ ಸಂಬಂಧಪಟ್ಟ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಿಗೆ ಸೂಚಿಸಿದೆ. ಆದ್ದರಿಂದ, ಆ ಅರ್ಜಿಯನ್ನು ಕೂಡ ಈ ಕ್ರಿಮಿನಲ್ ಅರ್ಜಿಯೊಂದಿಗೆ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಪೀಠ, ವಿಭಾಗೀಯ ಪೀಠದ ಸೂಚನೆಯಂತೆ ಮಾರ್ಪಡಿಸಿದ ತಕರಾರು ಅರ್ಜಿಯನ್ನು ಈ ಕ್ರಿಮಿನಲ್ ಅರ್ಜಿಯೊಂದಿಗೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

Last Updated : Aug 2, 2021, 8:56 PM IST

ABOUT THE AUTHOR

...view details