ಕರ್ನಾಟಕ

karnataka

ETV Bharat / state

ಕ್ರಿಮಿನಲ್ ನ್ಯಾಯ ಸುಧಾರಣೆ ಹರಿಕಾರ ನ್ಯಾ.ಸಿ.ಎಂ.ಬಸವಾರ್ಯ ಇನ್ನಿಲ್ಲ - ಸಿ.ಎಂ.ಬಸವಾರ್ಯ ಸಾವು

ಮೂಲತಃ ಶಿವಮೊಗ್ಗ ಜಿಲ್ಲೆಯವರಾದ 93 ವರ್ಷದ ಸಿ. ಎಂ.ಬಸವಾರ್ಯ, ಹೈಕೋರ್ಟ್​ನಲ್ಲಿ ರಿಜಿಸ್ಟ್ರಾರ್ ಜನರಲ್ ಆಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದು, ಅನಾರೋಗ್ಯದ ಕಾರಣದಿಂದಾಗಿ ನಿನ್ನೆ ವಿಧಿವಶರಾಗಿದ್ದಾರೆ.

.ಸಿ.ಎಂ.ಬಸವಾರ್ಯ

By

Published : Jul 4, 2020, 12:33 PM IST

ಬೆಂಗಳೂರು: ಅನಾರೋಗ್ಯಕ್ಕೆ ತುತ್ತಾಗಿದ್ದ ರಾಜ್ಯ ಹೈಕೋರ್ಟ್​ನ ನಿವೃತ್ತ ರಿಜಿಸ್ಟ್ರಾರ್ ಜನರಲ್ ಮತ್ತು ಹೈಕೋರ್ಟ್ ತರಬೇತಿ ವಿಭಾಗದ ನಿರ್ದೇಶಕ ಸಿ. ಎಂ.ಬಸವಾರ್ಯ(93) ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ.

1928ರ ಜುಲೈ 27ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದ್ದ ಇವರು, ಬೆಂಗಳೂರು ವಿವಿಯಿಂದ ಕಾನೂನು ಪದವಿ ಪಡೆದು 1960 ರಲ್ಲಿ ಮುನ್ಸಿಫ್ ಮ್ಯಾಜಿಸ್ಟ್ರೇಟ್ ಆಗಿ ನ್ಯಾಯಾಂಗ ಸೇವೆಗೆ ನೇಮಕಗೊಂಡಿದ್ದರು. ಬಳಿಕ ಚಿಕ್ಕಬಳ್ಳಾಪುರ, ರಾಮನಗರ, ಬೆಳಗಾವಿ, ಧಾರವಾಡ, ಬೀದರ್, ಕಲಬುರ್ಗಿ, ತುಮಕೂರು, ಕಾರವಾರಗಳಲ್ಲಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

1980 ರಿಂದ 85 ರವರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ ಬಸವಾರ್ಯ ಅವರನ್ನು ಬಳಿಕ ಹೈಕೋರ್ಟ್​ನ ತರಬೇತಿ ವಿಭಾಗದ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು. ಈ 5 ವರ್ಷದ ಅವಧಿಯಲ್ಲಿ ತರಬೇತಿ ಪಡೆದ ನೂರಾರು ನ್ಯಾಯಾಧೀಶರು ಇಂದು ವಿವಿಧ ನ್ಯಾಯಾಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಸವಾರ್ಯರ ದಕ್ಷ ಸೇವೆ ಗುರುತಿಸಿದ ಕೇಂದ್ರ ಸರ್ಕಾರ 1990 ರಲ್ಲಿ ಅಪರಾಧ ನ್ಯಾಯ ಸುಧಾರಣಾ ಸಮಿತಿ(ಕ್ರಿಮಿನಲ್ ಜಸ್ಟೀಸ್ ರಿಫಾರ್ಮ್ ಕಮಿಟಿ) ನಿರ್ದೇಶಕರಾಗಿ ನೇಮಕ ಮಾಡಿತು. ಈ ವೇಳೆ, ನ್ಯಾ. ವಿ.ಎಸ್ ಮಳಿಮಠ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಿದ ಸಮಿತಿ, ದೇಶದ ಎಲ್ಲಾ ಹೈಕೋರ್ಟ್ ಗಳಿಗೆ ತೆರಳಿ ಪರಿಶೀಲನೆ ನಡೆಸಿ ಸಲ್ಲಿಸಿದ ವರದಿ ಅಪರಾಧ ಪ್ರಕರಣ, ನ್ಯಾಯ ಸುಧಾರಣೆಯಲ್ಲಿ ಅತಿ ದೊಡ್ಡ ಬದಲಾವಣೆಯನ್ನೇ ತಂದಿತು. ದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ತೆಹಲ್ಕಾ ಡಾಟ್ ಕಾಮ್ ನ ತನಿಖೆಯಲ್ಲಿ ಪಾಲ್ಗೊಂಡಿದ್ದು ಕೂಡ ಇವರ ವೃತ್ತಿ ಬದುಕಿನ ಮೈಲಿಗಲ್ಲುಗಳಲ್ಲಿ ಒಂದಾಗಿತ್ತು.

ನಿವೃತ್ತಿ ಬಳಿಕ ಹೈಕೋರ್ಟ್​ನಲ್ಲಿ ಹಿರಿಯ ವಕೀಲರಾಗಿ ಕೆಲ ಕಾಲ ಸೇವೆ ಸಲ್ಲಿಸಿದ ಬಸವಾರ್ಯ ಅವರು ಹಲವು ಶಿಕ್ಷಣ ಸಂಸ್ಥೆಗಳಿಗೆ ಸಲಹೆಗಾರರಾಗಿಯೂ ಕಾರ್ಯ ನಿರ್ವಹಸಿದ್ದರು. ಬಸವ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ರುದ್ರಾಭಿಷೇಕದ ಮೂಲಕ ಶಿವನನ್ನು ಪೂಜಿಸುತ್ತಿದ್ದ ಬಸವಾರ್ಯರು, ತಮ್ಮ ಬದುಕಿನುದ್ದಕ್ಕೂ ಶಿಸ್ತುಬದ್ದತೆಯಿಂದ, ಸ್ಥಿತ ಪ್ರಜ್ಞರಂತೆ ಜೀವಿಸಿದ್ದರು. ಇವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ABOUT THE AUTHOR

...view details