ಬೆಂಗಳೂರು:''ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸಿ ವಿದೇಶಿ ಯೂಟ್ಯೂಬರ್ ಫಿಡಿಯಾಸ್ ಪನಾಯೊಟ್ ಎಂಬಾತ ಟಿಕೆಟ್ ಖರೀದಿಸದೇ ಪ್ರಯಾಣಿಸಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ'' ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.
''ಉಚಿತವಾಗಿ ಹೇಗೆ ಪ್ರಯಾಣಿಸುವುದು ಎಂಬುದನ್ನು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಫಿಡಿಯಾಸ್ ಪನಾಯೊಟೌ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದೆ'' ಎಂದು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?:ಭಾರತದಲ್ಲಿರುವ ಮೆಟ್ರೋ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಹೇಗೆ ಎಂಬುದನ್ನು ಯೂಟ್ಯೂಬರ್ ತನ್ನ ವಿಡಿಯೋದಲ್ಲಿ ತಿಳಿಸಿದ್ದಾನೆ. ಟಿಕೆಟ್ ಪಡೆಯದೆ ಪ್ಲಾಟ್‌ಫಾರಂಗೆ ಹೋಗಿ ರೈಲು ಹತ್ತಿದ್ದಾನೆ. ಬಳಿಕ ವಿಡಿಯೋದಲ್ಲಿ ವಿವರಣೆ ನೀಡುತ್ತಾ ಮೆಟ್ರೋ ನಿಲ್ದಾಣದಿಂದ ಹೊರಬಂದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಕೂಪನ್ ಹಾಕದೇ ಯೂಟ್ಯೂಬರ್ ಜಂಪ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆರೋಪಿ ನೀಲಿ ಶಾರ್ಟ್, ಬಿಳಿ ಟೀ ಶರ್ಟ್ ಧರಿಸಿದ್ದನು.