ಕರ್ನಾಟಕ

karnataka

ETV Bharat / state

ಬೆಂಗಳೂರು: ಬೈಕ್ ನಂಬರ್‌ಪ್ಲೇಟ್​ಗೆ ಮಾಸ್ಕ್ ತೊಡಿಸಿದ್ದ ಸವಾರನ ವಿರುದ್ಧ ಪ್ರಕರಣ ದಾಖಲು - ಸಂಚಾರ ನಿಯಮ ಉಲ್ಲಂಘನೆ

ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ನಂಬರ್‌ಪ್ಲೇಟ್‌ಗೆ ಮಾಸ್ಕ್ ಹಾಕಿದ್ದ ಬೈಕ್ ಸವಾರನ ವಿರುದ್ಧ ಬೆಂಗಳೂರಿನ ಮಹದೇವಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್ ನಂಬರ್ ಪ್ಲೇಟ್​ಗೆ ಮಾಸ್ಕ್ ಹಾಕಿದ್ದ ಸವಾರನ ವಿರುದ್ಧ ಕೇಸ್
ಬೈಕ್ ನಂಬರ್ ಪ್ಲೇಟ್​ಗೆ ಮಾಸ್ಕ್ ಹಾಕಿದ್ದ ಸವಾರನ ವಿರುದ್ಧ ಕೇಸ್

By ETV Bharat Karnataka Team

Published : Oct 18, 2023, 9:48 PM IST

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ನಾನಾ ಮಾರ್ಗ ಬಳಸುವುದನ್ನ ನೋಡಿದ್ದೇವೆ. ಈ ಮಧ್ಯೆ ಇಲ್ಲೊಬ್ಬ ಸವಾರ ಬೈಕ್​ನ ಹಿಂಭಾಗದ ನಾಮಫಲಕಕ್ಕೆ‌ ಮಾಸ್ಕ್ ಹಾಕಿ ಚಲಾಯಿಸುತ್ತಿದ್ದ. ಇಂಥ ಕೆಲಸಕ್ಕೆ ಕೈ ಹಾಕಿ ಇದೀಗ ಮಹದೇವಪುರ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ದಂಡದಿಂದ ನುಣುಚಿಕೊಳ್ಳಲು ಬೈಕ್ ಸವಾರ ಲಕ್ಷ್ಮಣ್ ಎಂಬವನು, ಹಿಂಭಾಗದ ನಂಬರ್‌ಪ್ಲೇಟ್​ಗೆ ಮಾಸ್ಕ್ ಹಾಕಿ‌ ಓಡಾಡುತ್ತಿದ್ದ.‌ ಸಾರ್ವಜನಿಕರೊಬ್ಬರು ನಾಮಫಲಕಕ್ಕೆ ಮಾಸ್ಕ್ ಹಾಕಿರುವ ಫೋಟೋವನ್ನು ಸಂಚಾರ ವಿಭಾಗದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.‌ ಈ ಫೋಟೋ ಆಧರಿಸಿ ಮಹದೇವಪುರ ಸಂಚಾರ ಪೊಲೀಸರು ಬೈಕ್ ಸವಾರರನನ್ನು ಪತ್ತೆ ಹಚ್ಚಿದ್ದಾರೆ‌.‌

ವಾಹನ ಪರಿಶೀಲನೆಯ ಸಂದರ್ಭದಲ್ಲಿ ಈ ಬೈಕ್ ಮೇಲೆ‌ 26 ಟ್ರಾಫಿಕ್ ಕೇಸ್‌ಗಳು ದಾಖಲಾಗಿರುವುದನ್ನು ಕಂಡುಕೊಂಡಿದ್ದಾರೆ. ಬೈಕ್ ಜಪ್ತಿ ಮಾಡಿ, ಮಹದೇವಪುರ ಕಾನೂನು‌ ಸುವ್ಯವಸ್ಥೆ ವಿಭಾಗದ‌ ಪೊಲೀಸರಿಗೆ ಒಪ್ಪಿಸ, ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸವಾರನ ವಿಚಾರಣೆ ನಡೆಸಿದಾಗ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಿಂದ‌ ತಪ್ಪಿಸಿಕೊಳ್ಳಲು ಮಾಸ್ಕ್ ಹಾಕಿಕೊಂಡಿದ್ದಾಗಿ ಹೇಳಿದ್ದಾನೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.

ಹಸಿರು ಲೈನ್ ಮೆಟ್ರೋದಲ್ಲಿ ಸರ್ಕಸ್​​; ವಿದ್ಯಾರ್ಥಿಗಳಿಗೆ ದಂಡ: ನಗರದ ಇನ್ನೊಂದೆಡೆ ಮಂಗಳವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಯಲಚೇನಹಳ್ಳಿಗೆ ಹೋಗುತ್ತಿದ್ದಾಗ ವಿದ್ಯಾರ್ಥಿಗಳು ನಮ್ಮ ಮೆಟ್ರೋದಲ್ಲಿ ಸರ್ಕಸ್ ಮಾಡಿದ್ದರು. ಈ ಸಂಬಂಧ ನಾಲ್ವರು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ನಿಲ್ಲುವಾಗ ಹಿಡಿಯುವ ಹ್ಯಾಂಡಲ್‌ಗಳನ್ನು ಬಳಸಿ ಅದರಲ್ಲಿ ಸರ್ಕಸ್ ಮಾಡಿದ್ದರು. ರೋಲಿಂಗ್ ವ್ಯಾಯಾಮ ಮಾಡಿದ ಮೀತ್ ಪಟೇಲ್ ಹಾಗೂ ಇತರ ಮೂವರು ವಿದ್ಯಾರ್ಥಿಗಳ ವರ್ತನೆಗೆ ಸಹಪ್ರಯಾಣಿಕರು ಆಗಲೇ ಕಿಡಿಕಾರಿದ್ದರು.

ಆದರೆ, ವಿದ್ಯಾರ್ಥಿಗಳು ಅದಕ್ಕೆ ಕಿವಿಕೊಡದೇ ಉದ್ಧಟತನ ಮುಂದುವರೆಸಿದ್ದರು. ಪ್ರಯಾಣಿಕರು ಈ ಹುಚ್ಚಾಟದ ವಿಡಿಯೋ ಮಾಡಿ ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗೆ ನೀಡಿದ್ದರು. ಬಳಿಕ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿಯೇ ಭದ್ರತಾ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮೆಟ್ರೋ ಆಸ್ತಿ ದುರ್ಬಳಕೆ ಮಾಡಿದ ವಿದ್ಯಾರ್ಥಿಗಳಿಗೆ 500 ರೂ. ದಂಡ ವಿಧಿಸಿ ಮುಂದೆ ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಿದ್ದಾರೆ.

ಮೆಟ್ರೋದಲ್ಲಿ ಗೋಬಿ ತಿಂದ ವ್ಯಕ್ತಿಗೆ ದಂಡ: ಮತ್ತೊಂದು ಪ್ರಕರಣದಲ್ಲಿ, ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸುತ್ತಿದ್ದ ಪ್ರಯಾಣಿಕನ ವಿರುದ್ಧ ಅಕ್ಟೋಬರ್ 6 ರಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕರಣ ದಾಖಲಿಸಿತ್ತು. ರೈಲು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡ ವಿಧಿಸಿತ್ತು. ಬಿಎಂಆರ್‌ಸಿಎಲ್ ಈ ರೀತಿಯ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಸರ್ಕಸ್ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ದಂಡ: ಖಡಕ್​ ವಾರ್ನಿಂಗ್​​

ABOUT THE AUTHOR

...view details