ಬೆಂಗಳೂರು: ಕೋವಿಡ್ ಚಿಕಿತ್ಸೆ ನೀಡುವ ಸಂಬಂಧ ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸರ್ಕಾರದ ನಿಯಮ ಉಲ್ಲಂಘಿಸದಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಉಲ್ಲಂಘಿಸಿದರೆ ಕೇಸ್ ದಾಖಲಿಸಲಾಗುವುದು ಎಂದರು.
ಯಾವುದೇ ಹಗರಣಗಳು ನಡೆದಿಲ್ಲ:
ಕೋವಿಡ್ ಸಲಕರಣೆ ಖರೀದಿಯಲ್ಲಿ ಪ್ರತಿಪಕ್ಷಗಳು ಹೇಳುವಂತೆ ಸರ್ಕಾರದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆ. ಯಾವುದೇ ದಾಖಲೆ ಒದಗಿಸಿಲ್ಲ ಎಂದರು.
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಈಶ್ವರ್ ಖಂಡ್ರೆ ಯಾವುದಾದರೂ ದಾಖಲೆ ಇದ್ದರೆ ಕೊಡಲಿ. ಸಿದ್ದರಾಮಯ್ಯನವರು ಯಾರ ಹೆಸರು ಹೇಳಿದ್ದಾರೋ ಅವರೇ ಸಮಜಾಯಿಷಿ ಕೊಟ್ಟಿದ್ದಾರೆ. ದಾಖಲೆ ಒದಗಿಸಿದರೆ ಸರ್ಕಾರ ಉತ್ತರ ಕೊಡುವುದಕ್ಕೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಮುರುಗೇಶ್ ನಿರಾಣಿ ಪೆನ್ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ತಮ್ಮ ಬಳಿ ಯಾವುದೇ ಪೆನ್ಡ್ರೈವ್ ಇಲ್ಲವೆಂದು ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವೇನು ಹೇಳಲೂ ಸಾಧ್ಯ ಎಂದು ಪ್ರಶ್ನಿಸಿದರು.
ಕಾರ್ಪೊರೇಟರುಗಳು, ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಸಭೆ ಮಾಡಿದ್ದು, ಇನ್ನಷ್ಟು ಹೆಚ್ಚು ಉತ್ತಮವಾಗಿ ಚುನಾಯಿತ ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣದಲ್ಲಿ ಭಾಗಿಯಾಗಬೇಕೆಂದು ಸೂಚಿಸಿದರು.