ಬೆಂಗಳೂರು: ನಾಲ್ಕು ಮಂದಿ ಅಪರಿಚಿತರು ಯುವ ವಿಜ್ಞಾನಿಯೊಬ್ಬರ ಕಾರಿನ ಗಾಜನ್ನು ಒಡೆದು ಹಲ್ಲೆಗೆ ಯತ್ನಿಸಿರುವ ಘಟನೆ ನಗರದ ಹೊರವಲಯದ ರಾವುತನಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಶುತೋಷ್ ಕುಮಾರ್ ಸಿಂಗ್ ಎಂಬ ಯುವ ವಿಜ್ಞಾನಿ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಸಂತ್ರಸ್ತ ವಿಜ್ಞಾನಿ ಸೆಂಟರ್ ಫಾರ್ ನ್ಯಾನೋ ಸಾಫ್ಟ್ ಮ್ಯಾಟರ್ ಸೈನ್ಸಸ್ನಲ್ಲಿ ವಿಜ್ಞಾನಿಯಾಗಿದ್ದಾರೆ.
ಆಗಸ್ಟ್ 24ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾವುತನಹಳ್ಳಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿತ್ತು. ಅಶುತೋಷ್ ಅವರು ಕ್ವಿಡ್ ಕಾರಿನಲ್ಲಿ ಬರುತ್ತಿದ್ದ ವೇಳೆ ನಾಲ್ಕು ಜನ ಅಪರಿಚಿತರು ದಾಳಿ ನಡೆಸಿದ್ದಾರೆ. ಬಳಿಕ ಕಾರನ್ನು ಹಿಂಬಾಲಿಸಿ ಹಿಂದಿನ ಗ್ಲಾಸ್ ಒಡೆದು ಹಾಕಿದ್ದಾರೆ. ಬಳಿಕ ಅಶುತೋಷ್ ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
ಎಫ್ಐಆರ್ ವಿವರ: ಪ್ರಾಥಮಿಕ ತನಿಖಾ ವರದಿ ಪ್ರಕಾರ, ಯುವ ವಿಜ್ಞಾನಿ ಅಶುತೋಷ್ ಅವರು ದಿನಾಂಕ 2023ರ ಆಗಸ್ಟ್ 24ರಂದು ರಾತ್ರಿ 12.45ರ ಸುಮಾರಿಗೆಗೆ ಆಫೀಸ್ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ರಾವುತನಹಳ್ಳಿ ರಸ್ತೆಯಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅಪಾಯಕಾರಿ ಆಯುಧಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. 2 ಬೈಕ್ನಲ್ಲಿ ನಾಲ್ಕು ಜನ ಇದ್ದರು. ಬಳಿಕ ಇವರಿಂದ ತಪ್ಪಿಸಿಕೊಂಡ ಅಶುತೋಷ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಮನೆಗೆ ತೆರಳಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಮಾದನಾಯಕಹಳ್ಳಿ ಪೊಲೀಶ್ ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿದ್ದಾರೆ.
ಘಟನೆಯಿಂದ ನನಗೆ ತುಂಬಾ ಭಯವಾಗಿದೆ. ನನ್ನ ಜೀವಕ್ಕೆ ಅಪಾಯವಿದೆ. ಜೊತೆಗೆ ನನ್ನ ಕಾರು ಕೂಡ ಜಖಂಗೊಂಡಿದೆ. ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಶುತೋಷ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :Bengaluru crime: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ದರೋಡೆಕೋರನ ಬಂಧನ