ಬೆಂಗಳೂರು: ರಸ್ತೆಯಲ್ಲಿ ತಾವು ಬಂದಾಗ ಎದ್ದು ಮರ್ಯಾದೆ ಕೊಡಲಿಲ್ಲವೆಂದು ಯುವಕನೊಬ್ಬನನ್ನು ಪುಂಡರ ಗುಂಪೊಂದು ಮಾರಕಾಸ್ತ್ರ ಹಿಡಿದು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ಆಗಸ್ಟ್ 27ರಂದು ಮಡಿವಾಳದ ವೆಂಕಟಾಪುರದಲ್ಲಿ ನಡೆದಿದೆ. ರಮೇಶ್ ಹಲ್ಲೆಗೊಳಗಾದ ಯುವಕ. ಸಂಜೆ 6:30 ರ ಸುಮಾರಿಗೆ ರಮೇಶ್ ವೆಂಕಟಾಪುರ ಬಳಿ ಟೀ ಕುಡಿಯಲು ತೆರಳಿದ್ದ. ಈ ವೇಳೆ ಟೀ ಅಂಗಡಿ ಬಳಿ ಬಂದಿದ್ದ ಕಾವೇರಿ ಶಿವು ಮತ್ತವನ ಗ್ಯಾಂಗ್ ರಮೇಶನಿಗೆ 'ಏನೋ ನಾವ್ ಬಂದ್ರು ಎದ್ದೇಳಲ್ವಾ?' ಎಂದು ಅವಾಜ್ ಹಾಕಿದೆ. ನೋಡ ನೋಡುತ್ತಿದ್ದಂತೆ ಮಾರಕಾಸ್ತ್ರ ಹಿಡಿದು ಆತನನ್ನ ಅಟ್ಟಾಡಿಸಿ ಹಲ್ಲೆ ನಡೆಸಿದೆ. ಸದ್ಯ ರಮೇಶ್ ನೀಡಿರುವ ದೂರಿನನ್ವಯ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಮಾತನಾಡಿ, "ಆರೋಪಿ ಶಿವು ಹಾಗೂ ರಮೇಶ್ ಪರಿಚಿತರೇ ಆಗಿದ್ದು ಹಣಕಾಸಿನ ವ್ಯವಹಾರ ಸಹ ಇತ್ತು. ಸೆಪ್ಟೆಂಬರ್ 1ರ ಸಂಜೆ ಮಡಿವಾಳ ಸಮೀಪದ ವೆಂಕಟಾಪುರದಲ್ಲಿ ಕ್ರಿಕೆಟ್ ಆಡುವಾಗ, ಶಿವು ತನ್ನ ಬ್ಯಾಟಿಂಗ್ ಸರದಿ ಬಂದಾಗ ರಮೇಶ್ ಬಳಿ ಬ್ಯಾಟ್ ಕೇಳಿದ್ದ, ಆದರೆ ರಮೇಶ್ ಬ್ಯಾಟ್ ಕೊಟ್ಟಿರಲಿಲ್ಲ. ಇದೇ ಸಿಟ್ಟಿನಿಂದ ಪಂದ್ಯ ಮುಗಿದ ಮೇಲೆ ಶಿವು ಮತ್ತು ಆತನ ಸ್ನೇಹಿತರು ರಮೇಶ್ ನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಶಿವು ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯಾರಿಗೆ ಯಾರು ಹಣ ಕೊಡಬೇಕಿತ್ತು ಅನ್ನೋದು ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.