ಆನೇಕಲ್ (ಬೆಂಗಳೂರು): ಮನೆ ಮಾರಾಟ ಮಾಡುವುದಾಗಿ ತಿಳಿಸಿ ಮೋಸ ಮಾಡಿದ್ದಾರೆಂದು ಆರೋಪಿಸಿದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಪರಪ್ಪನ ಅಗ್ರಹಾರ ಸಮೀಪದ ನಾಗಮಂಗಲದಲ್ಲಿ ಕಳೆದ ರಾತ್ರಿ ನಡೆದಿದೆ. ಲಕ್ಷಾಂತರ ರೂಪಾಯಿ ವಂಚಿಸಿರುವ ಕುರಿತು ಮಹಿಳೆ ಆತ್ಮಹತ್ಯೆಗೆ ಯತ್ನಿಸುವಾಗ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ನಾಗಮಂಗಲದಲ್ಲಿ ಬಾಡಿಗೆಗೆ ಮನೆ ಪಡೆದು ಮಹಿಳೆ ಹಾಗೂ ಆಕೆಯ ಕುಟುಂಬದವರು ವಾಸವಿದ್ದರು. ಈ ಮನೆ ನೀಡಿದ್ದ ಇಳೆಯರಾಜ ಎಂಬವರು ವಂಚಿಸಿದ್ದಾರೆ ಅನ್ನೋದು ಮಹಿಳೆಯ ದೂರು. ಮನೆಯನ್ನು 92 ಲಕ್ಷ ರೂಪಾಯಿಗೆ ಸೇಲ್ ಮಾಡುವುದಾಗಿ ಇಳೆಯರಾಜ ಹೇಳಿದ್ದರಂತೆ. ಮುಂಗಡವಾಗಿ 31.50 ಲಕ್ಷ ರೂಪಾಯಿ ಹಣವನ್ನು ಸಂತ್ರಸ್ಥ ಮಹಿಳೆಯ ಕುಟುಂಬದ ಬಳಿ ಪಡೆದಿದ್ದರು ಎನ್ನಲಾಗಿದೆ. ಆದ್ರೆ 2018ರಲ್ಲಿ ಮಹಿಳೆಯ ತಂದೆ ತೀರಿಕೊಂಡಿದ್ದರು. ಈ ಸಂದರ್ಭದಲ್ಲಿ ಬೇರೆಯವರಿಗೆ ಇಳೆಯರಾಜ ಮನೆ ಮಾರಾಟ ಮಾಡಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.
ಇದನ್ನು ಪ್ರಶ್ನಿಸಿ ಮಹಿಳೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ವಾಪಸ್ ನೀಡುವುದಾಗಿ ಹೇಳಿಕೊಂಡು ಬರುತ್ತಿದ್ದ ಇಳೆಯರಾಜ, ಕಳೆದ ಕೆಲವು ದಿನಗಳಿಂದ ನಿಮಗೆ ಯಾವುದೇ ಹಣ ಕೊಡಬೇಕಿಲ್ಲ ಎಂದಿದ್ದರಂತೆ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನೆಯವರು ಆತ್ಮಹತ್ಯೆ ಯತ್ನ ನೋಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡಿಗೆದಾರರ ಕಿರುಕುಳ- ಯಜಮಾನಿ ಆತ್ಮಹತ್ಯೆ: ಹಾಸನದಲ್ಲಿ ಮಹಿಳೆಯೊಬ್ಬರು ಬಾಡಿಗೆದಾರ ಮಹಿಳೆಯ ಕಿರುಕುಳ ತಾಳಲಾರದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂನ್ 17ರಂದು ನಡೆದಿದೆ. ಈ ಮಹಿಳೆಯ ತಾಯಿ ತನ್ನ ಮಗಳ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಕರಣದ ಬಗ್ಗೆ ಎಸ್ಪಿ ಹರಿರಾಮ್ ಶಂಕರ್ ಅವರು ಮಾಹಿತಿ ನೀಡಿದ್ದರು.
ದಾಸರಕೊಪ್ಪಲು ತಿರುಮಲ ಕಲ್ಯಾಣ ಮಂಟಪದ ಮುಂಭಾಗ ಲಲಿತಮ್ಮ ಹಾಗೂ ಪತಿ ನಾಗರಾಜು ವಾಸವಾಗಿರುವುದರ ಜೊತೆಗೆ ಬಾಡಿಗೆ, ಭೋಗ್ಯಕ್ಕಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಕೆಳಭಾಗದ ನೆಲ ಮಹಡಿಯಲ್ಲಿ ಲಲಿತಾ ದಂಪತಿ ಹಾಗೂ ಇತರರು ವಾಸವಾಗಿದ್ದರು. ಮೇಲ್ಭಾಗದ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಈ ಪೈಕಿ ಎರಡು ವರ್ಷದ ಹಿಂದೆ ಮೊದಲ ಮಹಡಿಯ ಉತ್ತರ ಭಾಗದ ಮನೆಯನ್ನು ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ - ನಟರಾಜ ದಂಪತಿಗೆ 5 ಲಕ್ಷ ರೂ. ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಲಾಗಿತ್ತು. ಭೋಗ್ಯಕ್ಕೆ ಬಂದ ಒಂದು ವರ್ಷದ ನಂತರ ಸುಧಾರಣಿ ನಟರಾಜ ದಂಪತಿ ವಿನಾಕಾರಣ ಲಲಿತಾ ಅವರೊಂದಿಗೆ ಜಗಳ ತೆಗೆಯುತ್ತಿದ್ದರು. ಜೂನ್ 16ರಂದು ಚಿನ್ನದ ಸರ ಕದ್ದಿದ್ದೀಯಾ, ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಸುಧಾರಾಣಿ ನಿಂದಿಸಿದ್ದಾರೆ. ಇದರಿಂದ ನೊಂದ ಲಲಿತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ