ಕರ್ನಾಟಕ

karnataka

ETV Bharat / state

ಬೆಂಗಳೂರು: ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ತಡೆದು ಪುಂಡಾಟ; ಇಬ್ಬರ ಬಂಧನ - ಇಬ್ಬರು ಪುಂಡರ ಬಂಧನ

ರಸ್ತೆಯಲ್ಲಿ ಸಂಚರಿಸುವಾಗ ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ತಡೆದು ಗಾಜಿಗೆ ಹಾನಿ ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ವೈಟ್​ಫೀಲ್ಡ್​ ಪೊಲೀಸರು ಬಂಧಿಸಿದ್ದಾರೆ.

Etv Bharat
ಹಾರ್ನ್ ಮಾಡಿ ದಾರಿ ಕೇಳಿದಕ್ಕೆ ಕಾರು ತಡೆದು ಪುಂಡಾಟ.. ಇಬ್ಬರ ಬಂಧನ

By

Published : Aug 8, 2023, 7:04 PM IST

ಎಸ್​. ಗಿರೀಶ್, ಡಿಸಿಪಿ ವೈಟ್ ಫೀಲ್ಡ್ ವಿಭಾಗ

ಬೆಂಗಳೂರು : ಹಾರ್ನ್ ಮಾಡಿ ದಾರಿ ಕೇಳಿದರು ಎಂದು ಕೋಪಗೊಂಡು ಕಾರು ಅಡ್ಡಗಟ್ಟಿ ಗಾಜಿಗೆ ಹಾನಿಗೊಳಿಸಿ ದುಂಡಾವರ್ತಿ ತೋರಿದ್ದ ಇಬ್ಬರು ಪುಂಡರನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುರುಳಿ ಹಾಗೂ ರಘು ಎಂದು ಗುರುತಿಸಲಾಗಿದೆ. ಕಾರು ಚಾಲಕ ಪ್ರೀತಂ ದತ್ತ ಎಂಬವರು ನೀಡಿದ ದೂರಿನ ಆಧಾರದ ಮೇರೆಗೆ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.‌

ಕಳೆದ ಆಗಸ್ಟ್ 5ರಂದು ಸಿದ್ದಾಪುರ ಬಳಿ ಕಿಡಿಗೇಡಿಗಳು ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರು. ಕಾರು ಚಲಾಯಿಸುತ್ತಿದ್ದ ಪ್ರೀತಂ ದತ್ತ ಹಾರ್ನ್ ಮಾಡಿ ದಾರಿ ಕೇಳಿದ್ದಾರೆ.‌‌ ಇದರಿಂದ‌ ಕೆರಳಿದ ಆರೋಪಿಗಳು ದಾರಿ ಬಿಡದೆ ಅಂಕುಡೊಂಕಾಗಿ ಬೈಕ್ ಚಾಲನೆ ಮಾಡಿದ್ದರು.‌‌ ಕೆಲ ಸಮಯ ಬೈಕ್ ಹಿಂದೆಯೇ ಹೋಗಿ ನಂತರ ಪ್ರೀತಂ ದತ್ತ ಹಾರ್ನ್ ಮಾಡಿದ್ದಾರೆ. ದಾರಿ ಬಿಡದೆ ಸತಾಯಿಸುತ್ತಿರುವುದನ್ನು ಕಂಡು ವೇಗವಾಗಿ ಬೈಕ್ ಹಿಂದಿಕ್ಕಿ ಕಾರು ಚಾಲನೆ‌ ಮಾಡಿ ಮುಂದೆ ಹೋಗಿದ್ದರು. ಈ ವೇಳೆ ಹಿಂಬಾಲಿಸಿಕೊಂಡ ಬಂದ ಆರೋಪಿಗಳು ಮಾರ್ಗಮಧ್ಯೆ ಪ್ರೀತಂ ದತ್ತಾರ ಕಾರನ್ನು ಅಡ್ಡಗಟ್ಟಿದ್ದರು.

ವಾಹನದಿಂದ‌ ಕೆಳಗಿಳಿದ ಪ್ರೀತಂ ದತ್ತ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.‌ ಕಾರಿನ ಸೈಡ್ ಗ್ಲಾಸ್ ಒಡೆದು ಹಾನಿಗೊಳಿಸಿದ್ದಾರೆ. ಸ್ಥಳೀಯರು ಚಾಲಕ‌ನ ನೆರವಿಗೆ ಬರುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಕಿಡಿಗೇಡಿಗಳ ದುಂಡಾವರ್ತನೆ ಕಾರಿನ ಡ್ಯಾಶ್ ಬೋರ್ಡ್‌ನ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಘಟನೆಯ ದೃಶ್ಯವನ್ನು ಪ್ರೀತಂ ದತ್ತ ನಗರ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್, "ವೈಟ್​ ಫೀಲ್ಡ್​ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ಪ್ರೀತಂ ದತ್ತ ಎಂಬವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿರುವಾಗ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಅಡ್ಡಗಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತುಕತೆಯಾಗಿದೆ. ಒಟ್ಟು ಮೂರು ಬಾರಿ ಈ ರೀತಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಒಂದು ಕಲ್ಲಿನಿಂದ ಕಾರಿನ ಸೈಡ್​ ಗ್ಲಾಸನ್ನು ಒಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದೇವೆ. ಬಂಧಿತ ಮುರಳಿ ಸೀಗೆಹಳ್ಳಿಯಲ್ಲಿರುವ ಟೆನ್ನಿಸ್ ಅಕಾಡೆಮಿಯೊಂದರಲ್ಲಿ ಬಾಲ್ ಬಾಯ್ ಕೆಲಸ ಮಾಡುತ್ತಿದ್ದ. ರಘು ಎಲೆಕ್ಟ್ರಿಷಿಯನ್​ ಕೆಲಸ ಮಾಡುತ್ತಿದ್ದ" ಎಂದು ಮಾಹಿತಿ ನೀಡಿದರು.

ಕಳೆದ‌‌ ಜುಲೈನಲ್ಲಿ ವರ್ತೂರಿನ ಗುಂಜೂರು ಬಳಿ ಇದೇ ಮಾದರಿಯ ಘಟನೆ ನಡೆದಿತ್ತು.

ಇದನ್ನೂ ಓದಿ :ಪತ್ನಿಗೆ ಕಳ್ಳಿ, ಕಳ್ಳಿ ಎಂದು ಹೀಯಾಳಿಸುತ್ತಿದ್ದ ಪರಿಚಿತರು.. ಅವಮಾನ ಸಹಿಸಲಾಗದೇ ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

ABOUT THE AUTHOR

...view details