ಬೆಂಗಳೂರು: ಕದ್ದ ಬೈಕ್ನಲ್ಲಿ ಹಾಡಹಗಲೇ ನಗರದಲ್ಲಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನು ಜೆ ಸಿ ನಗರ ಪೊಲೀಸರು ಸೆರೆಹಿಡಿದಿದ್ದಾರೆ. ನೆಲಮಂಗಲದ ಇಮ್ರಾನ್ ಹಾಗೂ ಡಿ ಜೆ ಹಳ್ಳಿಯ ಆಸೀಫ್ ಬಂಧಿತರಾಗಿದ್ದು, ಒಂದು ಬೈಕ್ ಹಾಗೂ 14 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ. ಹಲವು ವರ್ಷಗಳಿಂದ ಸಂಘಟಿತರಾಗಿ ಇಬ್ಬರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು, ಜೆ ಸಿ ನಗರ, ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಸೇರಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಾಡಹಾಗಲೇ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಅವರಿಂದ ಮೊಬೈಲ್ ಹಾಗೂ ಹಣ ಸುಲಿಗೆ ಮಾಡುತ್ತಿದ್ದರು.
ಕೃತ್ಯವೆಸಗಿದ ಬಳಿಕ ಮೊಬೈಲ್ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಇಮ್ರಾನ್ ವಿರುದ್ಧ 20 ಹಾಗೂ ಆಸೀಫ್ ವಿರುದ್ಧ 10 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇನ್ನು ಇತ್ತೀಚೆಗೆ ಜೆ ಸಿ ನಗರದ ವಿಲಿಯಂ ಸ್ಟೋರ್ನಲ್ಲಿ ರಾಬರಿ ಮಾಡಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಹೆಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಸರಣಿ ಕಳ್ಳರನ್ನು ಬಂಧಿಸಿ ನಿವಾಸಿಗಳಿಗೆ ರಕ್ಷಣೆ ನೀಡಿ:ಬೆಂಗಳೂರುನಗರದ ಹೃದಯ ಭಾಗದಲ್ಲಿರುವ ಬಿನ್ನಿಪೇಟೆಯಲ್ಲಿ ಹಾಡಹಗಲೇ ಸರಣಿ ಕಳ್ಳತನ ಮಾಡುತ್ತಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಮತ್ತೆಂದೂ ಕಳ್ಳತನವಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಮೋಹನ್ ದಾಸರಿ ನೇತೃತ್ವದ ಎಎಪಿ ತಂಡ ಜನರ ಸಮಸ್ಯೆಗಳನ್ನು ಆಲಿಸಿತು. ಬಳಿಕ ಸ್ಥಳೀಯ ನಿವಾಸಿಗಳ ಪರವಾಗಿ ಖುದ್ದಾಗಿ ಜೆಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು.