ಬೆಂಗಳೂರು: ಯುವತಿಯೋರ್ವಳ ವಿಚಾರವಾಗಿ ಮೂವರು ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದು, ಓರ್ವನ ತಲೆಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರಿನ ಕಂಟೋನ್ಮೆಂಟ್ ಬಳಿಯಿರುವ ತಿಮ್ಮಯ್ಯ ಸರ್ಕಲ್ನಲ್ಲಿ ತಡರಾತ್ರಿ ನಡೆದಿದೆ. ಮದ್ಯದ ಅಮಲಿನಲ್ಲಿ ಗಫರ್ ಹಾಗೂ ಹುಸೇನ್ ಯುವತಿಯೊಬ್ಬಳ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಗಫರ್ನ ತಲೆಗೆ ಹುಸೇನ್ ಹಾಗೂ ಮತ್ತೋರ್ವ ಬಿಯರ್ ಬಾಟಲ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಗಫರ್ನ ತಲೆಗೆ ತೀವ್ರ ಗಾಯಗಳಾಗಿದ್ದು, ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ. ಹೈಗ್ರೌಂಡ್ಸ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಬೌರಿಂಗ್ ಅಸ್ಪತ್ರೆಗೆ ದಾಖಲಿಸಿದ್ದಾರೆ. ಗಫರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲ್ಲೆ ನಡೆಸಿದ ಹುಸೇನ್ ಹಾಗೂ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವತಿಯ ವಿಚಾರವಾಗಿ ಯುವಕರು ಗಲಾಟೆ ಮಾಡಿಕೊಂಡು ಸಾವಲ್ಲೋ ಅಥವಾ ನೋವಲ್ಲೋ ಜಗಳ ಅಂತ್ಯ ಕಂಡ ಘಟನೆಗಳು ಈ ಮೊದಲು ವರದಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲೇ ಇಂತಹದ್ದೊಂದು ಘಟನೆ ವರದಿಯಾಗಿತ್ತು. ಯುವಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದು, ಬಳಿಕ ಮೃತದೇಹ ಎಸೆದು ಹೋಗಿರುವ ಘಟನೆ ಕೆಂಗೇರಿ ವ್ಯಾಪ್ತಿಯ ಕೋಣಸಂದ್ರ ಕೆರೆ ಬಳಿ ನಡೆದಿತ್ತು. ಮೊಹಮ್ಮದ್ ತಾಹೀರ್ (19) ಕೊಲೆಯಾದ ಯುವಕ. ಜುಲೈ 10ರ ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಾಲೇಔಟ್ನ ತನ್ನ ಮನೆಯಿಂದ ಹೊರ ಹೋದ ತಾಹೀರ್ ಮರುದಿನ ಶವವಾಗಿ ಪತ್ತೆಯಾಗಿದ್ದ.
ಘಟನೆ ಹಿನ್ನೆಲೆ: ತಾಹೀರ್ ಚಂದ್ರಾಲೇಔಟ್ ನಿವಾಸಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ತಾಹೀರ್ ಹಾಗೂ ಚಾಮರಾಜಪೇಟೆಯ ಟಿಪ್ಪು ನಗರದ ನಿವಾಸಿ ನ್ಯಾಮತ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಜುಲೈ 10 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿದ್ದ ತಾಹೀರ್ಗೆ ನ್ಯಾಮತ್ ಮತ್ತು ಆತನ ಸ್ನೇಹಿತರು ಕರೆ ಮಾಡಿ ಬರ ಹೇಳಿದ್ದರು.