ಬೆಂಗಳೂರು: ಕ್ರೈಂ ಪೊಲೀಸ್ ಸಿಬ್ಬಂದಿಗಳೆಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅರುಣ್, ರಾಕೇಶ್ ಹಾಗೂ ಹರೀಶ್ ಬಂಧಿತ ಆರೋಪಿಗಳು. ಕ್ರೈಂ ಪೊಲೀಸ್ ಸೋಗಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯನ್ನು ಆತನ ಹಾಸ್ಟೆಲ್ ನಿಂದ ಕರೆದೊಯ್ದಿದ್ದ ಆರೋಪಿಗಳು, ಆತನನ್ನು ಬೆದರಿಸಿ 1.70 ಲಕ್ಷ ರೂ. ಸುಲಿಗೆ ಮಾಡಿದ್ದರು.
ಆತನ ಹಾಸ್ಟೆಲ್ ನಿಂದ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು, 'ನಾವು ಕ್ರೈಂ ಪೊಲೀಸ್ ಸಿಬ್ಬಂದಿ, ಮಾದಕ ವಸ್ತು ಪ್ರಕರಣವೊಂದರಲ್ಲಿ ನಿನ್ನ ಹೆಸರು ಕೇಳಿ ಬಂದಿದೆ. ನೀನು ಮಾದಕ ಪದಾರ್ಥ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ವೈದ್ಯಕೀಯ ತಪಾಸಣೆ ಮಾಡಬೇಕು' ಎಂದು ಬೆದರಿಸಿದ್ದರು. ಬಳಿಕ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕಾರಿನಲ್ಲಿ ಸುತ್ತಾಡಿಸಿ ಆತನಿಂದ ಆನ್‌ಲೈನ್ ರೂಪದಲ್ಲಿ 1.70 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು. ನಂತರ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಸಿ ಹಾಸ್ಟೆಲ್ ಬಳಿ ತಂದು ಬಿಟ್ಟು ಪರಾರಿಯಾಗಿದ್ದರು.
ಹಣ ಕಳೆದುಕೊಂಡ ವಿದ್ಯಾರ್ಥಿ ಸದಾಶಿವನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು ಆರೋಪಿಗಳ ವಿರುದ್ಧ ಯಶವಂತಪುರ ಠಾಣೆಯಲ್ಲಿಯೂ ಒಂದು ಪ್ರಕರಣ ದಾಖಲಾಗಿದೆ. ಆರೋಪಿಗಳು ಕೆಲವೊಮ್ಮೆ ಪೊಲೀಸ್ ಭಾತ್ಮೀದಾರರಾಗಿಯೂ ಕೆಲಸ ಮಾಡಿದ್ದರು. ಹೀಗಾಗಿ ಕೆಲ ಪೊಲೀಸ್ ಸಿಬ್ಬಂದಿಗಳ ಪರಿಚಯವಿದೆ ಎಂದು ತಿಳಿದುಬಂದಿದೆ.
ಆದರೆ ಆರೋಪಿತರು ಅದನ್ನೇ ಬಂಡವಾಳವನ್ನಾಗಿಸಿಕೊಂಡು ಸುಮಾರು ಹದಿನೈದಕ್ಕೂ ಅಧಿಕ ಸುಲಿಗೆ ಮಾಡಿರುವ ವಿಚಾರ ಸಹ ಬಯಲಾಗಿದೆ. ಸದ್ಯ ಬಂಧಿತ ಆರೋಪಿಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.