ಕರ್ನಾಟಕ

karnataka

Bengaluru crime: ಚರ್ಚ್​ ಒಳಗೆ ನುಗ್ಗಿ ವಸ್ತು ದ್ವಂಸಗೊಳಿಸಿದ ವ್ಯಕ್ತಿ ಬಂಧನ

By

Published : Jun 21, 2023, 1:15 PM IST

Updated : Jun 21, 2023, 9:36 PM IST

ಚರ್ಚ್​ಗೆ ನುಗ್ಗಿ ಕೆಲ ವಸ್ತುಗಳಿಗೆ ಹಾನಿ ಮಾಡಿದ ಆರೋಪಿಯನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆ ಮಾಡಿದ್ದ ನಾಲ್ವರ ಬಂಧನ
ಹಲ್ಲೆ ಮಾಡಿದ್ದ ನಾಲ್ವರ ಬಂಧನ

ಡಿಸಿಪಿ ಡಾ.ಭೀಮಾಶಂಕರ ಗುಳೇದ್

ಬೆಂಗಳೂರು:ಚರ್ಚ್ ಬಾಗಿಲು ಮುರಿದು ಒಳಗೆ ನುಗ್ಗಿದ ವ್ಯಕ್ತಿಯೊಬ್ಬ ಚರ್ಚ್‌ನ ಕೆಲ ವಸ್ತುಗಳಿಗೆ ಹಾನಿ ಮಾಡಿರುವ ಘಟನೆ ಬುಧವಾರ ನಸುಕಿನ ಜಾವ ನಗರದ ಕಮ್ಮನಹಳ್ಳಿಯಲ್ಲಿ ನಡೆದಿದೆ. ಸುತ್ತಿಗೆ ಬಳಸಿ ಸೆಂಟ್ ಪಿಯಸ್ ಚರ್ಚ್ ಬಾಗಿಲು ಮುರಿದು, ಹಾನಿಗೊಳಿಸಿದ್ದ ಟಾಮ್ ಮ್ಯಾಥ್ಯೂ (20) ಎಂಬ ಆರೋಪಿಯನ್ನ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ‌.

ಬೆಳಗಿನ ಜಾವ 4:30ರ ಸುಮಾರಿಗೆ ಚರ್ಚ್ ಬಳಿ ಬಂದಿದ್ದ ಟಾಮ್ ಮ್ಯಾಥ್ಯೂ ಸುತ್ತಿಗೆ ಬಳಸಿ ಚರ್ಚ್ ಬಾಗಿಲು ಮುರಿದಿದ್ದ. ಬಳಿಕ ಚರ್ಚ್ ಒಳಗಿರುವ ಕೆಲ ವಸ್ತುಗಳಿಗೆ ಹಾನಿ ಮಾಡಿದ್ದ. ಘಟನೆಯ ಮಾಹಿತಿ ತಿಳಿದ ತಕ್ಷಣ ತ್ವರಿತವಾಗಿ ಆರೋಪಿಯ ವಿಳಾಸ ಪತ್ತೆಹಚ್ಚಿದ ಬಾಣಸವಾಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಟಾಮ್ ಮ್ಯಾಥ್ಯೂ

ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಡಾ.ಭೀಮಾಶಂಕರ ಗುಳೇದ್, ''ಬುಧವಾರ ಬೆಳಗಿನಜಾವ ಚರ್ಚ್​ ಬಳಿ ಗಲಾಟೆ ನಡೆಯುತ್ತಿದೆ ಎಂಬ ಬಗ್ಗೆ ಹೊಯ್ಸಳ ಪೊಲೀಸ್​ಗೆ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿದಾಗ ವ್ಯಕ್ತಿಯೋರ್ವ ಸೆಕ್ಯೂರಿಟಿ ಗಾರ್ಡ್​ ಜೊತೆ ಜಗಳವಾಡುತ್ತಿರುವುದು ಕಂಡುಬಂದಿತ್ತು. ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದರು. ಜೊತೆಗೆ ಓರ್ವ ಸಿಬ್ಬಂದಿ ಸ್ಥಳದಲ್ಲೇ ಉಳಿದುಕೊಂಡು ಪರಿಶೀಲನೆ ನಡೆಸಿದಾಗ, ವ್ಯಕ್ತಿಯು ಸುತ್ತಿಗೆಯನ್ನು ಬಳಸಿ ಚರ್ಚ್​ ಬಾಗಿಲು ಒಡೆದು, ಒಳನುಗ್ಗಿ ಕೆಲ ವಸ್ತುಗಳನ್ನು ಜಖಂ ಮಾಡಿರುವುದು ಗೊತ್ತಾಗಿದೆ'' ಎಂದು ತಿಳಿಸಿದ್ದಾರೆ.

''ಈ ಬಗ್ಗೆ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ, ಆತ ಮೇಲ್ನೊಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದಾನೆ. ವಿಚಾರಣೆ ಸೂಕ್ತ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆಗ ಬಾಣಸವಾಡಿ ಪೊಲೀಸರು ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ವಿಳಾಸ ಕಂಡುಹಿಡಿದು ಆತನ ತಾಯಿಯನ್ನು ಪತ್ತೆ ಮಾಡಿದ್ದಾರೆ. ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಪ್ರಶಂಸನೀಯ ಕೆಲಸ ಮಾಡಿದ್ದಾರೆ'' ಎಂದು ಹೇಳಿದರು.

''ವ್ಯಕ್ತಿಯು ಸ್ಥಳೀಯನಾಗಿದ್ದು, ಸುಮಾರು 20 ವರ್ಷಗಳಿಂದ ನೆಲೆಸಿದ್ದಾರೆ. ಇತ್ತೀಚೆಗೆ ತಂದೆ ಮನೆಬಿಟ್ಟು ಹೋಗಿದ್ದು, ಇದಕ್ಕೆ ದುಃಖಿತನಾಗಿದ್ದ. ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಆತನ ತಾಯಿ ಇದೇ ಚರ್ಚ್​ಗೆ ಬಂದು ಪ್ರಾರ್ಥನೆ ಮಾಡುತ್ತಿದ್ದರು. ಅಲ್ಲದೆ, ಈತ ದೇವರ ಮೇಲಿನ ನಂಬಿಕೆ ಕಳೆದುಕೊಂಡಿದ್ದ. ತಾನೇ ದೇವರು ಎಂದೆಲ್ಲ ಹೇಳಿಕೊಂಡು ಅಡ್ಡಾಡುತ್ತಿದ್ದ. ಇಂದು ಬೆಳಗ್ಗೆ ಮದ್ಯದ ಅಮಲಿನಲ್ಲಿ ಬಂದು ಚರ್ಚ್​ನಲ್ಲಿ ಗಲಾಟೆ ಮಾಡಿದ್ದಾನೆ. ಕೆಲ ವಸ್ತುಗಳಿಗೆ ಹಾನಿ ಮಾಡಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಐಪಿಸಿ ಸೆಕ್ಷನ್ 295 (ಧಾರ್ಮಿಕ ಕೇಂದ್ರಗಳಿಗೆ ಹಾನಿ), 427 (ಸಾರ್ವಜನಿಕ ಹಾನಿ), 447 (ಕ್ರಿಮಿನಲ್ ಅತಿಕ್ರಮಣ) ಅಡಿ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ'' ಎಂದು ಡಿಸಿಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ರೌಡಿಶೀಟರ್ ಸಹಿತ ನಾಲ್ವರ ಬಂಧನ:ಬೈಕ್​ ಪಕ್ಕಕ್ಕೆ ಸರಿಸಲು ಹೇಳಿದ್ದಕ್ಕೆ ಚಾಕುವಿಂದ ಹಲ್ಲೆ ಮಾಡಿದ್ದ ರೌಡಿಶೀಟರ್ ಸಹಿತ ನಾಲ್ವರು ಆರೋಪಿಗಳನ್ನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್​ ಸಂದೀಪ್ ಮತ್ತು ಶಶಾಂಕ್, ಕಿರಣ್, ಶ್ರೀಧರ್ ಬಂಧಿತ ಆರೋಪಿಗಳು. ಇದೇ ತಿಂಗಳ 18ರಂದು ರಾತ್ರಿ ಪದ್ಮನಾಭ ನಗರದ ರಾಘವೇಂದ್ರ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು.

ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಹಲ್ಲೆಯ ದೃಶ್ಯಗಳು

ಪ್ರದೀಪ್ ಎಂಬಾತನ ಮೇಲೆ ಆರೋಪಿಗಳ ಸಹಿತ ಏಳು ಜನರ ತಂಡ ಹಲ್ಲೆ ಮಾಡಿರುವುದಾಗಿ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫ್ಲೆಕ್ಸ್​ಗಳನ್ನ ತರಲು ತೆರಳಿದ್ದ ಪ್ರದೀಪ್, ಮನೆಗೆ ವಾಪಸ್ ತೆರಳಲು ಮುಂದಾದಾಗ ಬೈಕ್​ವೊಂದು ಅಡ್ಡಲಾಗಿ ನಿಂತಿತ್ತು. ಆಗ ಪ್ರದೀಪ್ ಬೈಕ್ ಸೈಡಿಗೆ ತೆಗೆಯಿರಿ ನಾನು ಹೋಗಬೇಕು ಎಂದಿದ್ದ. ಅಷ್ಟಕ್ಕೆ ಸಿಟ್ಟಿಗೆದ್ದ ಪ್ರತಾಪ್ ಶೆಟ್ಟಿ ಎಂಬಾತ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ನಂತರ ಮಾರಕಾಸ್ತ್ರಗಳನ್ನು ಹಿಡಿದು ಬೆದರಿಸಿದ್ದಲ್ಲದೇ ತನ್ನ ಸಹಚರರನ್ನು ಕರೆಸಿ ಪ್ರದೀಪ್ ಜೊತೆಗಿದ್ದವರ ಮೇಲೆಯೂ ಹಲ್ಲೆ ಮಾಡಿದ್ದ. ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಗಾಯಗೊಂಡಿದ್ದ ಪ್ರದೀಪ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:Bengaluru crime: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ.. ಮಾಜಿ ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಪುಡಿರೌಡಿಯ ಹಾವಳಿ

Last Updated : Jun 21, 2023, 9:36 PM IST

ABOUT THE AUTHOR

...view details