ಕರ್ನಾಟಕ

karnataka

ETV Bharat / state

ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ.. ಕಾಮಾಕ್ಷಿಪಾಳ್ಯ ಪೊಲೀಸರಿಂದ ಔಟರ್ ರಿಂಗ್ ರೋಡ್ ರಾಬರ್ಸ್ ಬಂಧನ

Robbery accused arrested: ಗೊರಗುಂಟೆಪಾಳ್ಯ - ನಾಯಂಡಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಲಿಫ್ಟ್ ನೆಪದಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ
ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ

By ETV Bharat Karnataka Team

Published : Sep 9, 2023, 1:11 PM IST

ಬೆಂಗಳೂರು:ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತ ಆರೋಪಿಗಳು. ಗೊರಗುಂಟೆಪಾಳ್ಯ - ನಾಯಂಡಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಕೃತ್ಯ ಎಸಗುತ್ತಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಚಾಲಕ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ರಾತ್ರಿ ವೇಳೆ ಬಸ್ಸಿಗಾಗಿ ಕಾಯುವವರನ್ನು ಗುರಿಯಾಗಿಸಿಕೊಂಡು 'ಲಿಫ್ಟ್ ಕೊಡುವುದಾಗಿ' ಕಾರು ಹತ್ತಿಸಿಕೊಳ್ಳುತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಿಂಬದಿ ಸೀಟಿನಲ್ಲಿದ್ದ ಇನ್ನಿಬ್ಬರು ಆರೋಪಿಗಳು ಕತ್ತಿನ ಬಳಿ ಡ್ರ್ಯಾಗರ್ ಇಟ್ಟು ಬೆದರಿಸುತ್ತಿದ್ದರು. ಬೆದರಿಸುವಾಗ ಪ್ರಯಾಣಿಕರು ಕಿರುಚಿದರೆ ಯಾರಿಗೂ ತಿಳಿಯಬಾರದು ಎಂದು ಮ್ಯೂಸಿಕ್ ಸಿಸ್ಟಂ ಸೌಂಡ್ ಹೆಚ್ಚಿಸುತ್ತಿದ್ದರು.

ಆರೋಪಿಗಳಿಂದ ವಶಕ್ಕೆ ಪಡೆದ ದರೋಡೆಗೊಂಡಿದ್ದ ವಸ್ತುಗಳು ಹಾಗು ಕೃತ್ಯಕ್ಕೆ ಬಳಸುತ್ತಿದ್ದ ಕಾರು

ನಂತರ ಪ್ರಯಾಣಿಕನ ಜೇಬಿನಲ್ಲಿರುವ ಹಣ ಮಾತ್ರವಲ್ಲದೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ವರ್ಗಾವಣೆ ಮಾಡಿಕೊಂಡು ಮೊಬೈಲ್ ಫೋನ್ ಕಸಿದುಕೊಂಡು ಕಾರಿನಿಂದ ಇಳಿಸಿ ಪರಾರಿಯಾಗುತ್ತಿದ್ದರು.

ಎಲ್ಲೋ ಬೋರ್ಡ್ ಕಾರನ್ನು ಬಳಸಿಕೊಂಡು ಗೊರಗುಂಟೆಪಾಳ್ಯ ಸಿಗ್ನಲ್‌, ಸುಮ್ಮನಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಮೂರು ದಿನ ಮೂರು ಕೃತ್ಯ ಎಸಗಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ವಿಶೇಷ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ಸದ್ಯ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ‌ಕಾರು, ಮೊಬೈಲ್ ಫೋನ್, ಡ್ಯಾಗರ್, ದರೋಡೆಗೈದಿದ್ದ ಸ್ವಲ್ಪ ಹಣ ವಶಕ್ಕೆ ಪಡೆಯಲಾಗಿದೆ. ಓರ್ವ ಆರೋಪಿ ಇತ್ತೀಚಿಗೆ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದು ಅದೇ ಕಾರಿನಲ್ಲೇ ಕೃತ್ಯ ಎಸಗುತ್ತಿದ್ದದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಡಹಗಲೇ ಬೆಂಗಳೂರಿನಲ್ಲಿ ಮಾರಕಾಸ್ತ್ರ ತೋರಿಸಿ ದರೋಡೆ: ಸಿಲಿಕಾನ್​ ಸಿಟಿಯಲ್ಲಿ ಕಾನೂನನ್ನು ಹೆಚ್ಚಿಸಿದಷ್ಟು ಸಾಕಾಗುತ್ತಿಲ್ಲ. ದಿನೇ ದಿನೇ ದರೋಡೆಯಂಥಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹಾಡಹಗಲೇ ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿರುವ ಘಟನೆ ಆಗಸ್ಟ್​ನಲ್ಲಿ ನಡೆದಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಲಿಯಮ್ಸ್ ಟೌನ್​​ನಲ್ಲಿ ನಡೆದಿತ್ತು. ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಸ್ಕೂಟಿಯಲ್ಲಿ ಹೋಗುತ್ತಿದ್ದ ಸವಾರನನ್ನು ಅಡ್ಡಗಟ್ಟಿದ್ದರು.

ಬಳಿಕ ಮಾರಕಾಸ್ತ್ರ ತೋರಿಸಿ ಆತನ ಜೇಬಿನಲ್ಲಿದ್ದ ಮೊಬೈಲ್ ಫೋನ್, ವ್ಯಾಲೆಟ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರೊಬ್ಬರು ಟ್ವೀಟ್ ಮಾಡುವ ಮೂಲಕ‌ ಪೊಲೀಸರ ಗಮನಕ್ಕೆ ತಂದಿದ್ದರು. ಬೆಂಗಳೂರಲ್ಲಿ ಕಳ್ಳರ ಹಾವಳಿಗೆ ಬ್ರೇಕ್ ಬೀಳುತ್ತಿಲ್ಲ. ರಾತ್ರಿ ವೇಳೆ ಕೃತ್ಯ ಎಸಗುತ್ತಿದ್ದ ಖದೀಮರು ಇದೀಗ ಹಾಡಹಗಲೇ ಕೈಚಳಕ ತೋರಿಸುತ್ತಿದ್ದಾರೆ. ಇನ್ನು ಇದೇ ತರ ಬೆಳಗ್ಗೆಯೇ ತಾವರೆಕೆರೆಯಲ್ಲಿ ಚಿನ್ನದಂಗಡಿಗೆ ಕಳ್ಳರು ಕನ್ನ ಹಾಕಿದ್ದ ಘಟನೆ ನಡೆದಿತ್ತು. ಗ್ಯಾಸ್ ಕಟ್ಟರ್ ಬಳಸಿ ಹೆದ್ದಾರಿ ಬದಿಯಲ್ಲಿದ್ದ ಚಿನ್ನದಂಗಡಿಗೆ ನುಗ್ಗಿ ಚಿನ್ನ ದೋಚಲು ಯತ್ನಿಸಿ ವಿಫಲರಾಗಿದ್ದರು. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ:ಹೆದ್ದಾರಿಯಲ್ಲಿ ಅಡ್ಡಗಟ್ಟಿ ನಾಲ್ಕೂವರೆ ಕೋಟಿ ರೂ. ಲೂಟಿ.. ಐವರ ಬಂಧನ

ABOUT THE AUTHOR

...view details