ಅಂಗಡಿ ಮಾಲೀಕ ಅಬೂಬಕ್ಕರ್ ಮಾತನಾಡುತ್ತಿರುವುದು ಬೆಂಗಳೂರು:ಹೋಲ್ ಸೇಲ್ ಮೊಬೈಲ್ ಅಂಗಡಿಯಿಂದ ಮೊಬೈಲ್ ಫೋನ್ಗಳನ್ನು ಡೆಲಿವರಿ ಕೊಟ್ಟು ವಾಪಸ್ ಬರುತ್ತಿರುವ ವೇಳೆ ಸಂಚು ರೂಪಿಸಿ 5.25 ಲಕ್ಷ ರೂ. ಹಣ ಮತ್ತು ದ್ವಿಚಕ್ರ ವಾಹನ ದೋಚಿದ್ದ ಕಳ್ಳ ಸಹೋದರರನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಜೀಜ್ ಹಾಗೂ ಶಹಬಾದ್ ಬಂಧಿತ ಆರೋಪಿಗಳು.
ಘಟನೆ ಏನು?: ಅಬೂಬಕ್ಕರ್ ಎಂಬುವವರು ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಹೋಲ್ ಸೇಲ್ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಇದೇ ಅಂಗಡಿಯಲ್ಲಿ ಶಹಬಾದ್ ಕೆಲಸ ಮಾಡಿಕೊಂಡಿದ್ದ. ಜೂನ್ 28 ರಂದು ಕೆ ಆರ್ ಪುರಂನ ಮೂರು ವಿವಿಧ ಅಂಗಡಿಗಳಿಂದ ಮೊಬೈಲ್ ಫೋನ್ಗಳಿಗೆ ಆರ್ಡರ್ ಬಂದಿತ್ತು. ಮೊಬೈಲ್ ಫೋನ್ಗಳನ್ನು ಡೆಲಿವರಿ ಮಾಡಲು ಹೇಳಿ, ಹಣ ತರುವ ಕೆಲಸವನ್ನು ಅಂಗಡಿ ಮಾಲೀಕ ಅಬೂಬಕ್ಕರ್ ಅವರು, ಶಹಬಾದ್ ಹಾಗೂ ಮೊಹಮ್ಮದ್ ಎಂಬಾತನಿಗೆ ವಹಿಸಿದ್ದರು.
ಜೊತೆಗೆ ಅವರು ಹೋಗಲೆಂದು ದ್ವಿಚಕ್ರ ವಾಹನವನ್ನು ನೀಡಿ ಕಳುಹಿಸಿದ್ದರು. ಆದರೆ, ರಾತ್ರಿ ಗಾಬರಿಯಿಂದ ಬಂದಿದ್ದ ಶಹಬಾದ್ ಹಾಗೂ ಮೊಹಮ್ಮದ್, 'ಕಸ್ತೂರಬಾ ನಗರದ 1ನೇ ಕ್ರಾಸ್ನಲ್ಲಿ ತಮ್ಮನ್ನು ಅಡ್ಡಗಟ್ಟಿದ್ದ ಇಬ್ಬರು ವ್ಯಕ್ತಿಗಳು, ಸ್ಕೂಟರ್ನಲ್ಲಿ ಗಾಂಜಾ ಇರುವುದಾಗಿ ಹೇಳಿ ಪರಿಶೀಲಿಸಿದ್ದರು. ಬಳಿಕ ನಮ್ಮನ್ನು ಹೆದರಿಸಿ ಹಣವಿದ್ದ ಸ್ಕೂಟರ್ ಸಮೇತ ಪರಾರಿಯಾದರು' ಎಂದು ಹೇಳಿದ್ದರು. ಕೆಲಸಗಾರರ ಮಾತನ್ನು ನಿಜ ಎಂದು ನಂಬಿದ್ದ ಮಾಲೀಕ ಅಬೂಬಕ್ಕರ್ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ.. ಪೊಲೀಸ್ ಠಾಣೆ ಮೇಲೆಯೂ ದಾಳಿ: ಪುಂಡಾಟಿಕೆಗೆ ಕಡಿವಾಣ ಹಾಕಲು ಪೊಲೀಸರಿಂದ ಹರಸಾಹಸ
ಅಡ್ಡದಾರಿ' ಹಿಡಿದು ಸಿಕ್ಕಿಬಿದ್ದ ಕಳ್ಳರು:ಪ್ರಕರಣ ದಾಖಲಿಸಿಕೊಂಡ ಪೊಲೀಸರು 'ಮೈಸೂರು ರಸ್ತೆಯ ಮೇಲ್ಸೇತುವೆ ಇಳಿದ ನಂತರ ಮುಖ್ಯರಸ್ತೆಯಲ್ಲೇ ಇದ್ದ ಅಂಗಡಿಗೆ ಬರಲು ಕೆಲಸಗಾರರು ಅಡ್ಡ ರಸ್ತೆ ಬಳಸಿದ್ದೇಕೆ?' ಎಂದು ಅನುಮಾನಗೊಂಡು ತನಿಖೆ ಆರಂಭಿಸಿದ್ದರು. ಇಬ್ಬರು ಕೆಲಸಗಾರರನ್ನು ತಮ್ಮದೇ ಶೈಲಿಯಲ್ಲಿ ವಿಚಾರಿಸಿದಾಗ ಶಹಬಾದ್ ಕಳ್ಳಾಟ ಬಯಲಾಗಿತ್ತು.
ಕೆಲಸಗಾರರ ಪೈಕಿ ಕೇರಳ ಮೂಲದವನಾದ ಮೊಹಮ್ಮದ್ಗೆ ಬೆಂಗಳೂರು ಅಷ್ಟಾಗಿ ಪರಿಚಯವಿರಲಿಲ್ಲ. ಅದನ್ನೇ ಸರಿಯಾಗಿ ಬಳಸಿಕೊಂಡಿದ್ದ ಶಹಬಾದ್, ಮೊಬೈಲ್ ಡೆಲಿವರಿ ಕೊಟ್ಟು ಹಣ ತರುವ ಮುನ್ನ, ತನ್ನ ಸಹೋದರ ಅಜೀಜ್ಗೆ ಕರೆ ಮಾಡಿದ್ದ. ತಾನು ಬರುವ ಮಾರ್ಗ ಯಾವುದು, ಎಲ್ಲಿ ಹಣ ದೋಚಬಹುದು ಎಂದೆಲ್ಲ ಸಹೋದರನಿಗೆ ಮೊದಲೇ ಸೂಚನೆ ಕೊಟ್ಟಿದ್ದ. ಅದರಂತೆ ತನ್ನಿಬ್ಬರು ಸಹಚರರೊಂದಿಗೆ ಕಾದು ಕುಳಿತಿದ್ದ ಅಜೀಜ್, ಹಣ, ಹಾಗೂ ದ್ವಿಚಕ್ರ ವಾಹನ ದೋಚಿ ಪರಾರಿಯಾಗಿದ್ದ.
ಸದ್ಯ ಶಹಬಾದ್ನ ಅಸಲಿಯತ್ತು ತಿಳಿದ ಬಳಿಕ ಮೊಹಮ್ಮದ್ ಹಾಗೂ ಅಂಗಡಿ ಮಾಲೀಕ ಅಬೂಬಕ್ಕರ್ ದಂಗಾಗಿದ್ದಾರೆ. ಅಜೀಜ್ ಹಾಗೂ ಶಹಬಾದ್ನನ್ನು ಬಂಧಿಸಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಪೊಲೀಸರಿಂದ ಮಹಾರಾಷ್ಟ್ರದಲ್ಲಿ ಡ್ರಗ್ ಪೆಡ್ಲರ್ಸ್ ವಶಕ್ಕೆ ಪಡೆಯುವಾಗ ಹೈಡ್ರಾಮಾ: ಕೊನೆಗೂ ಆರೋಪಿಗಳ ಬಂಧನ