ಬೆಂಗಳೂರು:ಬಿರಿಯಾನಿ ಇಲ್ಲ ಎಂದಿದಕ್ಕೆ ಕುಪಿತಗೊಂಡು ಹೋಟೆಲ್ ಸಿಬ್ಬಂದಿ ಮೇಲೆ ಕರ್ನಾಟಕ ರಕ್ಷಣಾ ಸೇನೆ ಸಂಸ್ಥಾಪಕ ರಮೇಶ್ ಗೌಡ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದನ್ನು ಪ್ರಶ್ನಿಸಿದಕ್ಕೆ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದು, ಈ ಸಂಬಂಧ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ರಮೇಶ್ ಗೌಡ ಬಂಧಿತನಾಗಿದ್ದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳೆದ ಶನಿವಾರ ಘಟನೆ ನಡೆದಿದೆ. ಜೂನ್ 11ರ ತಡರಾತ್ರಿ ಸಹಕಾರ ನಗರದ 80ನೇ ಅಡಿ ರಸ್ತೆಯಲ್ಲಿರುವ ಸ್ಟಾರ್ ಬಿರಿಯಾನಿ ಹೋಟೆಲ್ಗೆ ರಮೇಶ್ ಗೌಡ ಹಾಗೂ ಆತನ ಬೆಂಬಲಿಗರು ಹೋಗಿದ್ದರು. ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಬಿರಿಯಾನಿ ಖಾಲಿಯಾಗಿದೆ ಎಂದು ಕ್ಯಾಷಿಯರ್ ಹೇಳಿದ್ದರು. ಆಕ್ರೋಶಗೊಂಡ ರಮೇಶ್ ಕ್ಯಾತೆ ತೆಗೆದಿದ್ದಾರೆ. ಹೋಟೆಲ್ ಮುಂಭಾಗದಲ್ಲಿ ಬರೆಯಲಾಗಿದ್ದ ಉರ್ದು ಅಕ್ಷರ ಕಂಡು ಕಿಡಿಕಾರಿದ್ದಾರೆ. ನೋಡು ನೋಡುತ್ತಿದ್ದಂತೆ ಮಾತಿನ ಚಕಮಕಿ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಹೊಯ್ಸಳ ಸಿಬ್ಬಂದಿಗೆ ಹೋಟೆಲ್ ಸಿಬ್ಬಂದಿ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ.
ಗಲಾಟೆ ತಾರಕಕ್ಕೇರುತ್ತಿದ್ದಂತೆ ಸಬ್ ಇನಸ್ಪೆಕ್ಟರ್ ಕೌಶಿಕ್ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ವಾಗ್ದಾಳಿ ನಡೆಸಿದ ಆರೋಪಿ ನನ್ನನ್ನೇ ಠಾಣೆಗೆ ಕರೆತಂದಿದ್ದೀರಾ. ನಾಳೆ ನಿಮ್ಮ ಕೆಲಸ ಕಿತ್ತುಕೊಳ್ಳುವೆ ಎಂದು ಹೇಳಿ ಸಮವಸ್ತ್ರ ಧರಿಸಿದ್ದ ಪಿಎಸ್ಐ ಕೊರಳು ಹಿಡಿದಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಹಾಗೂ ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿರುವ ಆರೋಪ ಸಂಬಂಧ ಕೊಡಿಗೇಹಳ್ಳಿ ಪೊಲೀಸರು ಪ್ರತ್ಯೇಕ ಎರಡು ಎಫ್ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.
ತನ್ನ ಹೆತ್ತ ತಾಯಿಯನ್ನೇ ಕೊಂದು ಮಗಳು:ತನ್ನ ಹೆತ್ತ ತಾಯಿಯನ್ನೇ ಹತ್ಯೆ ಮಾಡಿ ಸೂಟ್ ಕೇಸ್ನಲ್ಲಿ ಶವ ತುಂಬಿಕೊಂಡು ನಿನ್ನೆ(ಸೋಮವಾರ) ರಾತ್ರಿ 11:30ರ ಸುಮಾರಿಗೆ ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ಮಹಿಳೆಯೊಬ್ಬರು ಶರಣಾಗಿರುವ ಘಟನೆ ನಡೆದಿದೆ. ಆರೋಪಿ ಸೆನಾಲಿ ಸೇನ್ (39) ತನ್ನ 71 ವರ್ಷ ವಯಸ್ಸಿನ ತಾಯಿ ಬೀವಾ ಪಾಲ್ನ ಹತ್ಯೆ ಮಾಡಿದ ನಂತರ, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಕೋಲ್ಕತ್ತಾ ಮೂಲದ ಸೆನಾಲಿ, ಮಾಸ್ಟರ್ ಆಫ್ ಫಿಸಿಯೋಥೆರಪಿ ಓದಿದ್ದರು. ಮದುವೆಯಾಗಿ ಓರ್ವ ಮಗ ಸಹ ಇದ್ದಾನೆ. ಸುಮಾರು 6 ವರ್ಷದಿಂದ ಮೈಕೋ ಲೇಔಟ್ ವ್ಯಾಪ್ತಿಯಲ್ಲಿರುವ ಖಾಸಗಿ ಅಪಾರ್ಟ್ಮೆಂಟಿನಲ್ಲಿ ಸೆನಾಲಿ ನೆಲೆಸಿದ್ದರು. ತಂದೆಯ ಮರಣದ ಬಳಿಕ ತಾಯಿಯ ಜವಾಬ್ದಾರಿ ಕೂಡ ಸೆನಾಲಿಯ ಮೇಲಿತ್ತು. ಇನ್ನೂ ಒಂದೇ ಮನೆಯಲ್ಲಿದ್ದ ಸೆನಾಲಿಯ ತಾಯಿ ಮತ್ತು ಅತ್ತೆ ನಿತ್ಯ ಜಗಳವಾಡುತ್ತಿದ್ದರು ತಿಳಿದುಬಂದಿದೆ. ಇದರಿಂದ ಬೇಸತ್ತಿದ್ದ ಸೆನಾಲಿ ತನ್ನ ತಾಯಿಗೆ ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ತಾಯಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಂದಿದ್ದಾರೆ.
ಆರೋಪಿ ಸೆನಾಲಿ ಸೇನ್ ನಂತರ, ಸೂಟ್ ಕೇಸ್ನಲ್ಲಿ ತಾಯಿಯ ಶವ ಇರಿಸಿಕೊಂಡು ಅದರ ಜೊತೆಗೆ ತಂದೆಯ ಫೋಟೋ ಇಟ್ಟುಕೊಂಡಿದ್ದಾರೆ. ನಂತರ ಕ್ಯಾಬ್ ಬುಕ್ ಮಾಡಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆರೋಪಿ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಸೆನಾಲಿ ಸೇನ್ (39) ವಿರುದ್ಧ ಐಪಿಸಿ ಸೆಕ್ಷನ್ 302 ಹಾಗೂ ಇತರ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:IIT Aspirant: ಐಐಟಿ ಕೋಚಿಂಗ್ ಪಡೆಯುತ್ತಿದ್ದ ಯುವಕ ಆತ್ಮಹತ್ಯೆ: ಭೇಟಿಗೆ ಬಂದಿದ್ದ ಪೋಷಕರಿಗೆ ಆಘಾತ