ಬೆಂಗಳೂರು: ಅವಧಿ ಮೀರಿ, ಅನಧಿಕೃತವಾಗಿ ನಡೆಸಲ್ಪಡುತ್ತಿದ್ದ ಪಬ್, ಬಾರ್ ಮತ್ತು ರೆಸ್ಟೋರೆಂಟ್, ವಾಣಿಜ್ಯ ನೆಲೆಗಟ್ಟುಗಳು ಸೇರಿದಂತೆ ಕೇಂದ್ರ ವಿಭಾಗದ ಪ್ರಮುಖ ಸ್ಥಳಗಳಲ್ಲಿ ತಡರಾತ್ರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು 20 ವಿವಿಧ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ. ಅವಧಿ ಮೀರಿ ಮಧ್ಯರಾತ್ರಿ 1 ಗಂಟೆಯ ನಂತರವೂ ವ್ಯವಹರಿಸುತ್ತಿದ್ದವರ ವಿರುದ್ಧ 13 ಪ್ರಕರಣಗಳನ್ನು ದಾಖಲಿಸಲಾಗಿದೆ. ಅನೈತಿಕ ಕಳ್ಳ ಸಾಗಾಣಿಕೆ ಕಾಯ್ದೆಯಲ್ಲಿ ಓರ್ವ ಹೋಟೆಲ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿದೇಶಿ ಮಹಿಳಾ ಪ್ರಜೆಯನ್ನು ರಕ್ಷಿಸಲಾಗಿದೆ. ಅಲ್ಲದೇ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಅಡಚಣೆಯುಂಟು ಮಾಡುತ್ತಿದ್ದ ಮಂಗಳಮುಖಿ ವಿರುದ್ಧ 5 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಬೆಂಗಳೂರು ಪೊಲೀಸ್ ಇಲಾಖೆ ಹೆಸರಲ್ಲಿ ನಕಲಿ ಖಾತೆ:ಬೆಂಗಳೂರು ಪೊಲೀಸ್ ಇಲಾಖೆ ಹೆಸರಿನಲ್ಲಿ ನಕಲಿ X (ಟ್ವಿಟರ್) ಖಾತೆ ತೆರೆದು, ಕ್ರಿಕೆಟ್ ಬಗ್ಗೆ ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಸೇತುಪಟ್ಟುವಿನ ವೈದ್ಯಕೀಯ ವಿದ್ಯಾರ್ಥಿ ಮಹೇಶ್ ಕುಮಾರ್ ಎಂಬಾತ ನಕಲಿ ಖಾತೆ ಸೃಷ್ಟಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಕಲಿ ಖಾತೆ ವಿಚಾರ ಬೆಂಗಳೂರು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸೈಬರ್ ಕ್ರೈಂ ಪೊಲೀಸ್ ಇಲಾಖೆಯ ರವಿ ಎಂಬ ಕಾನ್ಸ್ಟೇಬಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ಕಂಪ್ಯೂಟರ್ ಮೂಲಕ ನಕಲಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ಗಳನ್ನು ಮಾಡಿರುವುದು ಹಾಗು ಐಪಿ ವಿಳಾಸವು ಪತ್ತೆಯಾಗಿತ್ತು. ಬಳಿಕ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇನ್ನು ತಮಾಷೆಗಾಗಿ ಟ್ವಿಟರ್ ಖಾತೆ ಆರಂಭಿಸಿರುವುದಾಗಿ ಮಹೇಶ್ ಕುಮಾರ್ ಹೇಳಿದ್ದಾನೆ. ಸದ್ಯ ಪೊಲೀಸರು ಮಹೇಶ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.