ಕರ್ನಾಟಕ

karnataka

ETV Bharat / state

Bengaluru crime: ಖಾಸಗಿ ಕಂಪನಿಯಲ್ಲಿ ಜೋಡಿ ಕೊಲೆ.. ಕಚೇರಿಗೆ ನುಗ್ಗಿದ ಮಾಜಿ ಉದ್ಯೋಗಿಯಿಂದ ಎಂಡಿ, ಸಿಇಒ ಬರ್ಬರ ಹತ್ಯೆ - ಖಾಸಗಿ ಕಂಪನಿಯಲ್ಲಿ ಜೋಡಿ ಕೊಲೆ

ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಖಾಸಗಿ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

CEO and MD killed in bengaluru
ಖಾಸಗಿ ಕಂಪನಿಯ ಎಂಡಿ, ಸಿಇಓ ಬರ್ಬರ ಹತ್ಯೆ

By

Published : Jul 11, 2023, 6:27 PM IST

Updated : Jul 11, 2023, 10:04 PM IST

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಮಂಗಳವಾರ ಸಂಜೆ ನಡೆದಿದೆ. ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಹಾಡಹಗಲೇ ಖಾಸಗಿ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರದಿಂದ ಕೊಚ್ಚಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ವಿನು ಕುಮಾರ್ ಎಂಬುವರನ್ನು ಕಂಪನಿಯ ಮಾಜಿ ಸಹೋದ್ಯೋಗಿ ಫಿಲಿಕ್ಸ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಸಂಜೆ 4 ಗಂಟೆ ಸುಮಾರಿಗೆ ಮಾರಕಾಸ್ತ್ರ ಹಿಡಿದು ಕಂಪನಿ ಕಚೇರಿಗೆ ನುಗ್ಗಿದ್ದ ಫಿಲಿಕ್ಸ್, ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನು ಕುಮಾರ್ ಅವರನ್ನು ಹತ್ಯೆ ಮಾಡಿದ್ದಾನೆ. ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯಂ, ವಿನು ಕುಮಾರ್ ಹಾಗೂ ಆರೋಪಿ ಫಿಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಜೀ ನೆಟ್ ಎನ್ನುವ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ ಫಣೀಂದ್ರ ಸುಬ್ರಹ್ಮಣ್ಯಂ ಹಾಗೂ ವಿನು ಕುಮಾರ್ ಸಹ ಕಂಪನಿ ತೊರೆದಿದ್ದರು. ಆ ಬಳಿಕ 2022ರ ನವೆಂಬರ್​​ನಲ್ಲಿ ಅಮೃತಹಳ್ಳಿಯ ಪಂಪಾ ಲೇಔಟ್​​ನಲ್ಲಿ‌ ತಮ್ಮದೇ ಇಂಟರ್ನೆಟ್ ಬ್ರಾಡ್ ಕಾಸ್ಟಿಂಗ್ ಎಂಬ ಹೊಸ ಕಂಪನಿ ಶುರು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?:ಜೀ ನೆಟ್ ಕಂಪನಿಯ ಗ್ರಾಹಕರನ್ನು ಫಣೀಂದ್ರ ಮತ್ತು ವಿನು ತಮ್ಮ ಕಂಪನಿಗೆ ಸೆಳೆಯುತ್ತಿದ್ದರು. ಈ ವಿಚಾರವಾಗಿ ಮಾತನಾಡಲು‌ ಇಂದು ಸಂಜೆ 3:45ರ ಸುಮಾರಿಗೆ ಫಿಲಿಕ್ಸ್ ಹಾಗೂ ಇನ್ನಿಬ್ಬರು ಫಣೀಂದ್ರ ನಡೆಸುತ್ತಿದ್ದ ಕಂಪನಿಯ ಕಚೇರಿಗೆ ಬಂದಿದ್ದಾರೆ. ಫಣೀಂದ್ರ ಸುಬ್ರಹ್ಮಣ್ಯ ಕ್ಯಾಬಿನ್​​ನಲ್ಲಿ ಕುಳಿತು‌ ಮಾತುಕತೆ ಆರಂಭಿಸಿದ್ದಾರೆ. ಈ ವೇಳೆ, ಆರೋಪಿಯು ಮಾರಕಾಸ್ತ್ರದಿಂದ ಫಣೀಂದ್ರನ ಮೇಲೆ ಹಲ್ಲೆ ಮಾಡಲಾಂಭಿಸಿದ್ದಾನೆ. ತಕ್ಷಣ ಆರೋಪಿಯನ್ನು ತಡೆಯಲು ಬಂದ ವಿನು ಕುಮಾರ್ ಮೇಲೆಯೂ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಬಳಿಕ‌ ಹಿಂಬದಿ ಬಾಗಿಲಿನಿಂದ ಫಿಲಿಕ್ಸ್ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ. ಹತ್ತು - ಹನ್ನೆರಡು ಜನ ಸಿಬ್ಬಂದಿ ಎದುರೇ ಏಕಾಏಕಿ ಫಣೀಂದ್ರ ಹಾಗೂ ವಿನು ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕಂಪನಿಯ ಸಿಬ್ಬಂದಿ ಆಸ್ಪತ್ರೆಗೆ ರವಾನಿಸುವ ಯತ್ನ ಮಾಡಿದ್ದರಾದರೂ, ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಅಲ್ಲಿಂದ ಸಿಬ್ಬಂದಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹೇಳುವುದೇನು?:ಮೇಲ್ನೋಟಕ್ಕೆ ಇದು ಬ್ಯುಸಿನೆಸ್ ವಿಚಾರವಾಗಿ ನಡೆದಿರುವ ಹತ್ಯೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಫಿಲಿಕ್ಸ್​ ಜತೆ ಇಬ್ಬರು ಆರೋಪಿಗಳ ಮಾಹಿತಿ ಲಭ್ಯವಾಗಿದ್ದು ಪತ್ತೆಕಾರ್ಯ ಮುಂದುವರೆಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾಧ್ಯಮಗಳಿಗೆ​ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ, ಈಶಾನ್ಯ ವಿಭಾಗದ ಡಿಸಿಪಿ‌ ಲಕ್ಷ್ಮಿ ಪ್ರಸಾದ್ ಸೇರಿದಂತೆ ಅಮೃತಹಳ್ಳಿಯ ಠಾಣಾ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪತ್ನಿಯ ಮೇಲೆ ಸಂಶಯ: ಬ್ಲೇಡ್‌ನಿಂದ 26 ದಿನಗಳ ಮಗುವಿನ ಕುತ್ತಿಗೆ ಕೊಯ್ದ ಪಾಪಿ ಅಪ್ಪ!

Last Updated : Jul 11, 2023, 10:04 PM IST

ABOUT THE AUTHOR

...view details