ಬೆಂಗಳೂರು: ಪ್ರತಿಷ್ಠಿತ ಮೊಬೈಲ್ ಕಂಪನಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ನಗರದಲ್ಲಿ ಕಳವು ಹಾಗೂ ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ಆರೋಪಿಯನ್ನು ಪೊಲೀಸ್ ಕಸ್ಟಡಿ ಪಡೆದು 29 ಲಕ್ಷ ಬೆಲೆಯ 512 ಗ್ರಾಂ ಬೆಲೆಯ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಬೈಯ್ಯಪ್ಪನಹಳ್ಳಿ ಪೊಲೀಸರು ಸಫಲರಾಗಿದ್ದಾರೆ.
ತಮಿಳುನಾಡು ಮೂಲದ ಮಾಮಾನಿ ಆಲಿಯಾಸ್ ಧೀನಾ ಬಂಧಿತ ಆರೋಪಿ. ಚೆನ್ನೈ, ನೆಲ್ಲೂರು ಹಾಗೂ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸೇರಿ ನಾನಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈತ ಅಪರಾಧ ಕೃತ್ಯವೆಸಗಿದ್ದನು. ಹೆಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಎಸಗಿದ್ದ ಕಳವು ಪ್ರಕರಣದಲ್ಲಿ ಬಂಧಿತನಾಗಿ ಕಳೆದ ಎರಡು ವರ್ಷಗಳಿಂದ ಜೈಲು ಪಾಲಾಗಿದ್ದನು. ಬೈಯ್ಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎರಡು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರೂ ಈತನ ಬಂಧನವಾಗಿರಲಿಲ್ಲ.
ಮತ್ತೊಂದೆಡೆ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದೇ ವ್ಯಕ್ತಿ ಜೈಲಿನಲ್ಲಿದ್ದಾಗ ಮಾಮಾನಿ ಸ್ನೇಹಿತನಾಗಿ ಗುರುತಿಸಿಕೊಂಡಿದ್ದನು. ಸೆರಮನೆಯಲ್ಲಿರುವಾಗ ಬೈಯ್ಯಪ್ಪನಹಳ್ಳಿಯಲ್ಲಿ ಮನೆಗಳ್ಳತನ ಮಾಡಿದ್ದೆ ಎಂಬುದರ ಬಗ್ಗೆ ಮಾಮಾನಿ ಕೊಲೆ ಪ್ರಕರಣ ಆರೋಪಿಗೆ ಹೇಳಿಕೊಂಡಿದ್ದನು. ಈ ವಿಷಯವನ್ನು ಪೊಲೀಸ್ ವಿಚಾರಣೆ ವೇಳೆ ಕೊಲೆ ಆರೋಪಿ ತನಿಖಾಧಿಕಾರಿ ಮುಂದೆ ಬಾಯ್ಬಿಟ್ಟಿದ್ದನು. ಇದೇ ಮಾಹಿತಿ ಆಧರಿಸಿ ಖಚಿತಪಡಿಸಿಕೊಂಡ ಇನ್ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ಬಾಡಿ ವಾರೆಂಟ್ ಮೇರೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣಗಳನ್ನು ಸ್ನೇಹಿತರಿಗೆ ಹಾಗೂ ವಿವಿಧ ಅಂಗಡಿಗಳಲ್ಲಿ ಗಿರವಿ ಇಟ್ಟಿದ್ದ 29 ಲಕ್ಷ ಬೆಲೆಯ 512 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಇ ಓದಿದವ ಕಳ್ಳನಾದ ಕಥೆಯೇ ರೋಚಕ:ತಮಿಳುನಾಡಿನಲ್ಲಿ ಎಂಜಿನಿಯರ್ ವ್ಯಾಸಂಗ ಮಾಡಿದ್ದ ಆರೋಪಿ ಪ್ರತಿಷ್ಠಿತ ಮೊಬೈಲ್ ಕಂಪನಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. 2019ರಲ್ಲಿ ಕಂಪನಿಯವರು ವಿವಿಧ ಕಾರಣಗಳಿಂದ ಈತನನ್ನು ಕೆಲಸದಿಂದ ತೆಗೆದುಹಾಕಿದ್ದರು. ಬಳಿಕ ಬೇರೆಲ್ಲೂ ಕೆಲಸ ಸಿಗದೆ ಮನೆಗಳ್ಳತನ ಎಸಗುವುದೇ ಕಾಯಕ ಮಾಡಿಕೊಂಡಿದ್ದ. ಕಳ್ಳತನವೆಸಗಲು ನಗರಕ್ಕೆ ಬರುತ್ತಿದ್ದ ಈತ ಬೀಗ ಹಾಕಿದ ಮನೆಗಳನ್ನು ಹಗಲಿನಲ್ಲಿ ಗುರುತಿಸಿ ರಾತ್ರಿ ವೇಳೆ ಬೀಗ ಒಡೆದು ಕಳ್ಳತನವೆಸಗುವ ಪ್ರವೃತ್ತಿ ಬೆಳೆಸಿಕೊಂಡಿದ್ದನು. ಈತನ ವಿರುದ್ಧ ರಾಜ್ಯ ಸೇರಿದಂತೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಡಕಾಯಿತಿ, ದರೋಡೆ ಹಾಗೂ ಕಳವು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:Bengaluru crime: ವಿದ್ಯುತ್ ಬಿಲ್ ಹೆಸರಿನಲ್ಲಿ 2 ಲಕ್ಷ ರೂ. ವಂಚನೆ.. ಪ್ರಕರಣ ದಾಖಲು