ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಸ್ನೇಹಿತನ ಹತ್ಯೆಗೆ ಸಂಚು ರೂಪಿಸಿದ್ದ ಕಿರಾತಕರು.. ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿತು ಕೊಲೆ ಸ್ಕೆಚ್​ - ಈಟಿವಿ ಭಾರತ ಕನ್ನಡ

ಗುಂಡಿಕ್ಕಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

crime-police-arrest-two-persons-for-allegedly-planning-to-shoot-dead-in-bangalore
ಬೆಂಗಳೂರು: ಗುಂಡು ಹಾರಿಸಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರ ಸೆರೆ

By ETV Bharat Karnataka Team

Published : Sep 17, 2023, 3:53 PM IST

ಬೆಂಗಳೂರು: ರಾಜಧಾನಿಯಲ್ಲಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ನೆತ್ತರು ಹರಿಯುವುದು ತಪ್ಪಿದೆ. ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಸೆರೆಹಿಡಿದಿದ್ದಾರೆ‌. ಮೊಹಮ್ಮದ್ ಜುಬೇರ್ ಹಾಗೂ ಪುರ್ಕಾನ್ ಆಲಿಖಾನ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಒಂದು‌ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಇವರು ರೌಡಿಶೀಟರ್ ಅನೀಸ್ ಹತ್ಯೆ ಮಾಡಲು ಸಂಚು ರೂಪಿಸಿದ್ದರು.

ಅನೀಸ್ ಹಾಗೂ ಇಬ್ಬರು ಆರೋಪಿಗಳು ಸ್ನೇಹಿತರಾಗಿದ್ದಾರೆ. ಮೂವರು ಸಹ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂವರ ನಡುವೆ ಹಣಕಾಸಿನ ವಿಚಾರಕ್ಕಾಗಿ ವೈಮನಸ್ಸು ಮೂಡಿತ್ತು. 2021ರಲ್ಲಿ ಪ್ರಕರಣವೊಂದರ ಸಂಬಂಧ ಅನೀಸ್ ಜೈಲು ಸೇರಿದ್ದ. ಇದೇ ವೇಳೆ‌ ಬಂಧಿತ ಆರೋಪಿಗಳ ಸಹಚರನಾಗಿದ್ದ ಆಲಿ ಎಂಬಾತನ ಕೊಲೆಯಾಗಿತ್ತು. ಅನೀಸ್ ಜೈಲಿನಲ್ಲಿದ್ದುಕೊಂಡೇ ಆಲಿನನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಆರೋಪಿಗಳು ಅನೀಸ್​ನ ಹತ್ಯೆ‌ ಮಾಡಲು‌ ಒಂದು ತಿಂಗಳಿಂದ ಸಂಚು‌ ರೂಪಿಸಿ ಕೊಂಡಿದ್ದರು.

ಇದಕ್ಕಾಗಿ ಮಹಾರಾಷ್ಟ್ರದಿಂದ ಪಿಸ್ತೂಲ್ ತರಿಸಿಕೊಂಡಿದ್ದರು. ಜೈಲಿಂದ ಬಿಡುಗಡೆಯಾಗಿದ್ದ ಅನೀಸ್ ಹತ್ಯೆ ಮಾಡಲು ಓಡಾಡುತ್ತಿದ್ದರು. ಈ ಬಗ್ಗೆ‌ ಖಚಿತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ₹7 ಕೋಟಿಗಿಂತ ಹೆಚ್ಚು ಮೌಲ್ಯದ ಮಾದಕವಸ್ತು ವಶ: ವಿದೇಶಿಗ ಸೇರಿ 14 ಮಂದಿ ಆರೋಪಿಗಳ ಬಂಧನ

ಪತ್ನಿ ಮೇಲೆ ಗುಂಡು ಹಾರಿಸಿ‌ ಕೊಲೆ ಮಾಡಿದ ಪತಿ:ಇತ್ತೀಚಿಗೆ, ಗುಂಡು ಹಾರಿಸಿ ಪತ್ನಿಯನ್ನೇ ಪತಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಆಲೂರು (ಕೆ) ಗ್ರಾಮದಲ್ಲಿ ನಡೆದಿತ್ತು. 36 ವರ್ಷದ ಹನುಮವ್ವ ಕೊಲೆಯಾದ ಮಹಿಳೆ. ಪತಿ ಕೊಲೆ ಆರೋಪಿ ಬಸವರಾಜ, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ‌. ಆಲೂರು (ಬಿ) ಗ್ರಾಮದ ನಿವಾಸಿಯಾದ ಬಸವರಾಜ ಎಂಬುವವರಿಗೆ ಕಳೆದ 18 ವರ್ಷಗಳ ಹಿಂದೆ ಆಲೂರು (ಕೆ) ಗ್ರಾಮದ ನಿವಾಸಿ ಹನುಮವ್ವ ಜೊತೆ ವಿವಾಹವಾಗಿತ್ತು.

ಕುಡಿತದ ಚಟಕ್ಕೆ ದಾಸನಾಗಿದ್ದ ಬಸವರಾಜ ಮದುವೆಯಾದಾಗಿನಿಂದ ಹನುಮವ್ವ ಜತೆ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಹನುಮವ್ವ ಗಂಡನನ್ನು ಬಿಟ್ಟು ತನ್ನ ತವರು ಮನೆಗೆ ಸೇರಿದ್ದಳು‌. ಕಳೆದ ಎರಡು ದಿನಗಳ ಹಿಂದೆ ಬಸವರಾಜ ಹೆಂಡತಿಯ ಮನೆಗೆ ಬಂದು ತನ್ನ ಮನೆಗೆ ಕರೆದುಕೊಂಡು ಹೋಗಲು ಬಯಸಿದ್ದ. ಆದರೆ, ಎರಡು ಮೂರು ದಿನಗಳ ಬಳಿಕ ಬರುವುದಾಗಿ ಹನುಮವ್ವ ಹೇಳಿ ಕಳುಹಿಸಿದ್ದಳು. ಕುಡಿದು ಬಂದಿದ್ದ ಬಸವರಾಜ ಮತ್ತೆ ಜಗಳ ತೆಗೆದಿದ್ದ. ಈ ವೇಳೆ, ಮನೆಯಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಪತ್ನಿ ಮೇಲೆ ಎರಗಿ ಎರಡು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ತಿಳಿದು ಚಿತ್ತಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದರು.

ABOUT THE AUTHOR

...view details