ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ಇಲ್ಲಿನ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ. ಭಾರತಿನಗರದ ನಿವಾಸಿ ರಹಮತ್ ಉಲ್ಲಾ ಬೇಗ್ ಶಿಕ್ಷೆಗೊಳಗಾದ ಅಪರಾಧಿ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಈತನ ವಿರುದ್ಧ ಭಾರತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ವಾದ-ಪ್ರತಿವಾದದ ಬಳಿಕ ತ್ವರಿತಗತಿ ನ್ಯಾಯಾಲಯ ನ್ಯಾ.ಕೆ.ಎನ್.ರೂಪ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನಗರ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದಿಂದ ಬಾಲಕಿಗೆ 20 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪರಾಧಿ ರಹಮತ್ 2020ರ ಫೆಬ್ರುವರಿ 9ರಂದು ಬಾಲಕಿಯ ಮನೆಯ ಮುಂದೆ ನಿಂತುಕೊಂಡು ಪ್ಯಾಂಟ್ ಬಿಚ್ಚಿ ಮಾರ್ಮಾಂಗ ತೋರಿಸಿ ಹಸ್ತಮೈಥುನ ಮಾಡಿಕೊಂಡಿದ್ದ.
ಇದನ್ನು ನೋಡಿ ಗಾಬರಿಗೊಂಡು ಮನೆಗೆ ಹೋಗುತ್ತಿದ್ದ ಅಪ್ರಾಪ್ತೆಯನ್ನು ಹಿಂಬಾಲಿಸಿ ಮತ್ತೆ ಹಸ್ತಮೈಥುನ ಮಾಡಿಕೊಂಡು ಬೆದರಿಸಿದ್ದಾನೆ. ಈ ವಿಷಯವನ್ನು ಬಾಲಕಿ ತಂದೆಯ ಗಮನಕ್ಕೆ ತಂದಿದ್ದಳು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಭಾರತಿನಗರ ಠಾಣೆಯ ಇನ್ಸ್ಪೆಕ್ಟರ್ ರಮೇಶ್ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಾದ-ಪ್ರತಿವಾದದ ಬಳಿಕ ಆರೋಪಿಯು ಲೈಂಗಿಕ ದೌರ್ಜನ್ಯ ನಡೆಸಿರುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಸರ್ಕಾರದ ಅಭಿಯೋಜಕರಾದ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.