ಬೆಂಗಳೂರು: ಆಟೋ ಚಾಲಕನ ಹಗಲು ರೌಡಿಸಂಗೆ ಅಮಾಯಕ ಸಹೋದರರ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ನಡೆದಿದೆ. ಆಟೋ ಚಾಲಕ ಅಶ್ವಥ್ ಎಂಬಾತನಿಂದ ಹಲ್ಲೆಗೊಳಗಾದ ಅಸ್ಸೋಂ ಮೂಲದ ಅಹ್ಮದ್ (28) ಸಾವನ್ನಪ್ಪಿದರೆ, ಆತನ ಸಹೋದರ ಆಯೂಬ್ ಗಾಯಗೊಂಡಿದ್ದಾರೆ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಅಹ್ಮದ್ ಹಾಗೂ ಆಯೂಬ್ ಸಹೋದರರು ಯಶವಂತಪುರದಲ್ಲಿ ವಾಸವಿದ್ದರು. ತಡರಾತ್ರಿ ಕೆಲಸ ಮುಗಿಸಿ ಆಟೋ ಪಡೆದು ಮನೆಗೆ ಹೊರಟಿದ್ದಾಗ ಚಾಲಕ ಅಶ್ವಥ್, ಡಬಲ್ ಬಾಡಿಗೆ ಕೇಳಿದ್ದಾರೆ. ಡಬಲ್ ಮೀಟರ್ ಯಾಕೆ.?' ಎಂದು ಪ್ರಶ್ನಿಸಿದ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಅಹ್ಮದ್ ಸಾವನ್ನಪ್ಪಿದ್ದು, ಆಯೂಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಕುರಿತು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಗೂಂಡಾಗಿರಿ ಇದೇ ಮೊದಲಲ್ಲ:ರ‍್ಯಾಪಿಡೋ ದ್ವಿಚಕ್ರ ವಾಹನ ಬುಕ್ ಮಾಡಿ ಕಾಯುತ್ತಿದ್ದ ಟೆಕ್ಕಿಯ ಮೇಲೆ ಆಟೋ ಚಾಲಕನೊಬ್ಬ ಆಟೋ ಹರಿಸಲು ಯತ್ನಿಸಿರುವ ಘಟನೆ ಮೇ 25ರಂದು ಬೆಳಗ್ಗಿನ ಜಾವ ಹೆಚ್ಎಸ್ಆರ್ ಲೇಔಟ್ ಸೆಕ್ಟರ್ 1ರಲ್ಲಿ ನಡೆದಿತ್ತು. ರ‍್ಯಾಪಿಡೋ ಕ್ಯಾಪ್ಟನ್ ನನ್ನು ತಡೆದ ಆಟೋ ಚಾಲಕನೊಬ್ಬ, ಆತನ ಕೈಯಲ್ಲಿದ್ದ ಹೆಲ್ಮೆಟ್ ಒಡೆದು, ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದಬ್ಬಾಳಿಕೆ ಮೆರೆದಿದ್ದ ಘಟನೆ ಮಾರ್ಚ್ 7ರಂದು ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು.