ಬೆಂಗಳೂರು: ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ತಮಿಳುನಾಡಿನ ಕುಖ್ಯಾತ ರೌಡಿಶೀಟರ್ ಗುರುಸ್ವಾಮಿ ಕೊಲೆ ಯತ್ನ ಪ್ರಕರಣ ಸಂಬಂಧ ಬಾಣಸವಾಡಿ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಆರೋಪಿ ಪ್ರಸನ್ನ ಎಂಬಾತನನ್ನು ಪೊಲೀಸರು ತಮಿಳುನಾಡಿನ ಮಧುರೈನಿಂದ ನಗರಕ್ಕೆ ಕರೆತಂದಿದ್ದಾರೆ. ಜೊತೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಗುರುಸ್ವಾಮಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ. ಕಳೆದ ಸೋಮವಾರ ಬ್ರೋಕರ್ನನ್ನು ಸಂಪರ್ಕಿಸಲು ಇಲ್ಲಿನ ಕಮ್ಮನಹಳ್ಳಿಗೆ ಬಂದಿದ್ದ. ಅಲ್ಲಿನ ಹೋಟೆಲ್ ಒಂದರಲ್ಲಿ ಟೀ ಕುಡಿಯುವಾಗಲೇ ತಮಿಳುನಾಡಿನಿಂದ ಬಂದಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಗುರುಸ್ವಾಮಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು.
ಬಳಿಕ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಗುರುಸ್ವಾಮಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಲೆಯತ್ನದ ಹಿಂದೆ ಹಳೆದ್ವೇಷ ಇರಬಹುದು ಎಂಬುದನ್ನು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡ ಪೊಲೀಸರು ಬಾಣಸವಾಡಿ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಮಧುರೈ ಹಾಗೂ ಧರ್ಮಪುರಿಯಲ್ಲಿ ಶೋಧ ನಡೆಸಿ ಆರೋಪಿ ಪ್ರಸನ್ನ ಎಂಬವನನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಈತನ ಪಾತ್ರದ ಬಗ್ಗೆ ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸ್ ಶೋಧ :ರಾಜಕೀಯ ನಂಟು ಹೊಂದಿದ್ದ ರೌಡಿ ಗುರುಸ್ವಾಮಿಗೆ 2003ರಿಂದಲೂ ವಿರೋಧಿ ಬಣದ ಜೊತೆ ತಿಕ್ಕಾಟ ನಡೆಯುತ್ತಿದೆ. ಈ ಎರಡು ಬಣದ ಗ್ಯಾಂಗ್ಗಳ ನಡುವೆ ಗ್ಯಾಂಗ್ ವಾರ್ ನಡೆಯುತ್ತಿತ್ತು. ಮೇಲ್ನೊಟಕ್ಕೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದ್ದರೂ, ನಿಖರ ಮಾಹಿತಿ ಪ್ರಮುಖ ಆರೋಪಿಗಳ ಬಂಧನ ಬಳಿಕವೇ ಗೊತ್ತಾಗಲಿದೆ. ಗ್ಯಾಂಗ್ ಪ್ರಮುಖ ಆರೋಪಿ ನವೀನ್ ಹಾಗೂ ಆತನ ಸಹಚರರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿ ನವೀನ್ ಅಪರಾಧ ಪ್ರಕರಣವೊಂದರ ವಾರೆಂಟ್ ಜಾರಿ ಹಿನ್ನೆಲೆ ತಮಿಳುನಾಡು ಪೊಲೀಸರ ಮುಂದೆ ಶರಣಾಗಿ ಜೈಲು ಪಾಲಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ :ಸೊಂಟ ಪಟ್ಟಿಯಲ್ಲಿ ₹1.58 ಕೋಟಿ ಮೌಲ್ಯದ ಚಿನ್ನ! ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಇಬ್ಬರು ಪ್ರಯಾಣಿಕರು