ಬೆಂಗಳೂರು: ನಗರದಲ್ಲಿ ಕೆಲ ಆಫ್ರಿಕನ್ ಪ್ರಜೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಎಲ್ಲೆಂದರಲ್ಲಿ ನಶೆಯಲ್ಲಿ ತೂರಾಡುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಶನಿವಾರ ಸಹ ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಸರ್ಕಲ್ ಬಳಿ ಕೆಲ ಆಫ್ರಿಕನ್ ಪ್ರಜೆಗಳು ದುರ್ವರ್ತನೆ ತೋರಿದ್ದಾರೆ. ಕೆಲ ಮಹಿಳೆಯರು ಅಮಲಿನಲ್ಲಿ ತೂರಾಡುತ್ತಿದ್ದುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು. ಈ ವೇಳೆ ಸಾರ್ವಜನಿಕರ ವಿರುದ್ಧ ಹರಿಹಾಯ್ದ ಆಫ್ರಿಕನ್ ಪ್ರಜೆಗಳು ಕೈಯಲ್ಲಿ ಕಲ್ಲು ಹಿಡಿದು ಸಿಕ್ಕ ಸಿಕ್ಕವರನ್ನ ಬೆದರಿಸಿರುವ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾದಕ ಪದಾರ್ಥ ಮಾರಾಟಮಾಡುತ್ತಿದ್ದ ನೈಜೀರಿಯನ್ ಪ್ರಜೆಯ ಬಂಧನ:ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನ ವಿವಿ ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಜಾನ್ ಇಗ್ವಾಯತ್ (30) ಬಂಧಿತ ಆರೋಪಿ. ಆರೋಪಿ ಹಾಗೂ ಮತ್ತೋರ್ವ ನೈಜೀರಿಯಾ ಪ್ರಜೆ ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದರು. ಆದರೆ ಗೋವಾದಿಂದ ಮಾದಕ ವಸ್ತುಗಳನ್ನು ತಂದು ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹಾಗೂ ಪಾರ್ಟಿಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳ ಕುರಿತು ಮಾಹಿತಿ ಪಡೆದು ದಾಳಿ ನಡೆಸಿದ ವಿವಿ ಪುರಂ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳು ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಮಾದಕ ಪದಾರ್ಥ ಸೇರಿದಂತೆ ಸುಮಾರು 2 ಕೋಟಿ ಮೌಲ್ಯದ 1 ಕೆ.ಜಿ 20 ಗ್ರಾಂ ಎಂಡಿಎಂಎ, ದ್ವಿಚಕ್ರ ವಾಹನ, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.