ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದ ಸ್ಥಿತಿಯಲ್ಲಿ ಶವ ಪತ್ತೆಯಾದ ಪ್ರಕರಣದ ತನಿಖೆ ಕೈಗೊಂಡ ತಲಘಟ್ಟಪುರ ಠಾಣಾ ಪೊಲೀಸರು, ಅದರ ಹಿಂದೆ ಕೊಲೆಗಾರರಿಗೆ ಹೋಟೆಲ್ ಮಾಲೀಕನ ಪತ್ನಿಯ ಪರಿಚಯ ಇರುವ ಕಾರಣ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಈ ಕೇಸ್ನಲ್ಲಿ ಅನಾಥ ಶವವಾಗಿ ಸಿಕ್ಕ ದೇಹದ ಸಾವಿನ ಹಿಂದಿನ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಪ್ರಕರಣದ ಹಿನ್ನೆಲೆ.. ಜೂನ್ 29ರಂದು ಗೊಟ್ಟಿಗೆರೆ ಪಾಳ್ಯದ ನೈಸ್ ರಸ್ತೆಯ ಫ್ಲೈಓರ್ ಕೆಳಭಾಗದಲ್ಲಿ ಪತ್ತೆಯಾದ ಶವ ಚನ್ನಪಟ್ಟಣ ಮೂಲದ ಅರುಣ್ (43) ಅವರದ್ದು ಎಂದು ತಿಳಿದು ಬಂದಿತ್ತು. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂಬುದು ಅರಿವಿಗೆ ಬಂದಿತ್ತು. ಈ ಉದ್ದೇಶ ಏನು ಎಂಬುದನ್ನು ಪತ್ತೆಹಚ್ಚಲು ಮುಂದಾದ ಪೊಲೀಸರಿಗೆ ಹತ್ಯೆಯ ಹಿಂದಿದ್ದ ಆತನ ಪತ್ನಿ ರಂಜಿತಾ ಹಾಗೂ ಆಕೆಯ ಪರಿಚಯಸ್ಥ ಗಣೇಶ್ ಎಂಬದು ಗೊತ್ತಾಗಿದೆ. ಅದರಂತೆ ಮಾಹಿತಿ ಕಲೆ ಹಾಕಿದ ಪೊಲೀಸರು ರಂಜಿತಾ ಹಾಗೂ ಗಣೇಶ್ ಸಹಿತ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಆರು ವರ್ಷದ ಹಿಂದೆ ರಂಜಿತಾಳನ್ನು ಮದುವೆಯಾಗಿದ್ದ ಅರುಣ್ ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಆರ್. ಆರ್. ನಗರದಲ್ಲಿ ಗೌಡ್ರು ಬೀಗರೂಟ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದರು. ಅದೇ ಹೋಟೆಲಿಗೆ ನೀರು ಹಾಕಲು ಬರುತ್ತಿದ್ದ ಗಣೇಶನೊಂದಿಗೆ ಅರುಣ್ ಪತ್ನಿ ರಂಜಿತಾ ಪರಿಚಯ ಮಾಡಿಕೊಂಡಿದ್ದರು. ಇಬ್ಬರ ಪರಿಚಯಕ್ಕೆ ಅರುಣ್ ಅಡ್ಡವಾಗಿದ್ದಾರೆ ಎಂದು ಇಬ್ಬರೂ ಸೇರಿ ಆತನನ್ನು ಮುಗಿಸಲು ಸಂಚು ರೂಪಿಸಿದ್ದರು.