ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಲಿವಿಂಗ್ ಟುಗೆದರ್ ಸಂಬಂಧಗಳು ಕೊಲೆಯಲ್ಲಿ ಅಂತ್ಯವಾಗುತ್ತಿರುವ ಘಟನೆಗಳು ಹೆಚ್ಚು ವರದಿಯಾಗುತ್ತಿವೆ. ಮುಂಬೈ ಹಾಗೂ ದೆಹಲಿ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹ ಪ್ರೀತಿ ಹೆಸರಿನಲ್ಲಿ ಹತ್ಯೆಗಳಾಗುತ್ತಿವೆ. ಕಳೆದ ಏಳೆಂಟು ತಿಂಗಳಲ್ಲಿ ಆರು ಕೊಲೆ ನಡೆದಿವೆ. ಪಾಶ್ಚಿಮಾತ್ಯ ಸಂಸ್ಕೃತಿಯಂತೆ ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಸಂಬಂಧಗಳು ಕ್ಷೀಣಿಸುತ್ತಿವೆ. ವಿವಾಹ ಮುನ್ನವೇ ಪ್ರೀತಿ ಹೆಸರಿನಲ್ಲಿ ಯುವ ಜನಾಂಗವು ಲಿವಿಂಗ್ ಟುಗೆದರ್ ಬಲೆಗೆ ಬೀಳುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಲಿವ್ ಇನ್ ರಿಲೇಷನ್ಶಿಪ್ ಮಾದರಿಯನ್ನು ಅನುಸರಿಸುವುದರಲ್ಲಿ ಮುಂದಿದ್ದಾರೆ. ಅಂತೆಯೇ ಜೊತೆಯಲ್ಲೇ ಇರೋಣ ಜೊತೆಯಲ್ಲೇ ಸಂಸಾರ ಮಾಡೋಣ ಎಂಬುವರು ಪ್ರೀತಿ ಹಾಗು ಲಿವಿನ್ನಲ್ಲಿ ಇದ್ದು, ಜೊತೆಯಾಗಿ ಇರಲು ಹಾತೊರೆದು ಬಳಿಕ ಲೈಫ್ಗೆ ಫುಲ್ಸ್ಟಾಪ್ ಇಡುತ್ತಿದ್ದಾರೆ.
ಪ್ರಕರಣ- 1: ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 15ರಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣ ದಾಖಲಾಗಿತ್ತು. ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಶುರುವಾಗಿದ್ದ ಜಗಳದಲ್ಲಿ ಪ್ರೇಯಸಿಯಾಗಿದ್ದ ಕೌಸರ್ ಎಂಬಾಕೆಯನ್ನು ಚಾಕುವಿನಿಂದ ಕುತ್ತಿಗೆಗೆ ಇರಿದು ಆರೋಪಿ ನದೀಪ್ ಪಾಷ ಕೊಲೆ ಮಾಡಿದ್ದ. ಈ ಜೋಡಿ ನಾಲ್ಕು ವರ್ಷಗಳಿಂದ ನಗರದಲ್ಲಿ ಲಿವಿಂಗ್ನಲ್ಲಿತ್ತು.
ಪ್ರಕರಣ- 2:ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 31ರಂದು ಮತ್ತೊಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣ ದಾಖಲಾಗಿತ್ತು. ವಿಕ್ಟರ್ ಎಂಬಾತ ಓರ್ವ ಯುವತಿ ಜೊತೆಗೆ ಲಿವಿಂಗ್ ಟುಗೆದರ್ನಲ್ಲಿದ್ದ. ಆದರೆ ಆ ಯುವತಿ ಸುಲೇಮಾನ್ ಎಂಬಾತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಇದರಿಂದ ಆಕ್ರೋಶಗೊಂಡು ಸುಲೇಮಾನ್ನನ್ನು ವಿಕ್ಟರ್ ಚಾಕುವಿನಿಂದ ಕೊಲೆ ಮಾಡಿದ್ದ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣ- 3:ಜೀವನ್ ಭಿಮಾ ನಗರದಲ್ಲಿ ಫೆಬ್ರವರಿ 28ರಂದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಪ್ರಕರಣ ದಾಖಲಾಗಿತ್ತು. ಆಂಧ್ರ ಮೂಲದ ದಿನಕರ್ ಮತ್ತು ಲೀಲಾ ಪವಿತ್ರ ಇಬ್ಬರು ಕಾಲೇಜು ದಿನದಿಂದ ಪ್ರೀತಿಯಲ್ಲಿ ಮುಳುಗಿದ್ದರು. ನಂತರ ಕೆಲಸ ಮಾಡಲು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೇರಿಕೊಂಡಿದ್ದರು. ದಿನ ಕಳೆದಂತೆ ಹಲವಾರು ವಿಚಾರಗಳಿಗೆ ಇಬ್ಬರ ಮನೆಯಲ್ಲಿ ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ತನ್ನನ್ನು ಬಿಟ್ಟುಬಿಡು.. ಮದುವೆಗೆ ಕುಟುಂಬದವರು ಒಪ್ಪಲ್ಲ ಎಂದು ಲೀಲಾ ಹೇಳಿದ್ದಳು. ಈ ವೇಳೆ ನಿನ್ನ ಬಳಿ ಮಾತಾಡಬೇಕು ಎಂದು ಜೀವನ್ ಭೀಮಾನಗರದ ಆಕೆ ಕೆಲಸ ಮಾಡುತ್ತಿದ್ದ ಆಫೀಸ್ ಬಳಿಗೆ ಬಂದಿದ್ದ ಅರೋಪಿ ಚಾಕುವಿನಿಂದ ಇರಿದಿದ್ದ ಸುಮಾರು ಹದಿನಾರು ಬಾರಿ ಇರಿದು ಕೊಲೆ ಮಾಡಿದ್ದ.
ಪ್ರಕರಣ- 4:ಪರಪ್ಪನ ಅಗ್ರಗಾರ ಠಾಣಾ ವ್ಯಾಪ್ತಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ ಪ್ರಕರಣ ದಾಖಲಾಗಿತ್ತು. ಮದುವೆಯಾಗು ಎಂದಿದ್ದಕ್ಕೆ ಲಿವಿನ್ನಲ್ಲಿ ಇದ್ದ ಪ್ರಿಯತಮೆಯನ್ನು ಕೊಲೆ ಮಾಡಲಾಗಿತ್ತು. ಸುನಿತಾ ಎಂಬಾಕೆ ಪ್ರಶಾಂತ್ ಜೊತೆಗೆ ಲಿವಿನ್ನಲ್ಲಿದ್ದಳು. ಕೆಲ ವರ್ಷಗಳಿಂದ ವಾಸ ಮಾಡುತ್ತಿದ್ದರು. ಈ ವೇಳೆ ಲಿವಿನ್ ಸಾಕಾಗಿ ಬೇಗ ಮದುವೆಯಾಗು ಎಂದು ಸುನಿತಾ ಕೇಳುತಿದ್ದಳು. ಇದಕ್ಕೆ ಕೋಪಗೊಂಡ ಪ್ರಶಾಂತ್ ಕುತ್ತಿಗೆ ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದ.
ಪ್ರಕರಣ- 5:ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮೇ 5ರಂದು ತಲೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣ ದಾಖಲಾಗಿತ್ತು. ನೇಪಾಳ ಮೂಲದ ಕೃಷ್ಣಕುಮಾರಿ ಎಂಬಾಕೆಯನ್ನು ಸಂತೋಷ್ ಎಂಬಾತ ಪ್ರೀತಿ ಮಾಡುತ್ತಿದ್ದ. ರಾಮಮೂರ್ತಿ ನಗರದಲ್ಲಿ ಕೆಲ ವರ್ಷಗಳಿಂದ ಲಿವಿನ್ನಲ್ಲಿದ್ದರು. ಆದರೆ ಪ್ರಿಯತಮೆ ಕೃಷ್ಣಕುಮಾರಿ ವಿರುದ್ಧ ಅನುಮಾನ ಪಡುತ್ತಿದ್ದ ಆರೋಪಿ ಸಂತೋಷ್ ಜಗಳ ತೆಗೆದು ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.
ಪ್ರಕರಣ- 6: ಜೀವನ್ ಭೀಮಾನಗರದ ವ್ಯಾಪ್ತಿಯಲ್ಲಿ ಜೂನ್ 7ರಂದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣ ದಾಖಲಾಗಿತ್ತು. ಒಂದೇ ಕಡೆ ಕೆಲಸ ಮಾಡುತ್ತಿದ್ದ ಇಬ್ಬರು ಪ್ರೀತಿಸಿ ನಂತರ ಬೇರೆ ಕಡೆ ಕೆಲಸ ಶುರು ಮಾಡಿದ್ದರು. ಯುವತಿ ಆಕಾಂಕ್ಷಾ ಲವ್ಗೆ ಬ್ರೇಕ್ ಅಪ್ ಎಂದಿದ್ದಕ್ಕೆ ಕೋಪಗೊಂಡಿದ್ದ ಅರೋಪಿ ಅರ್ಪಿತ್ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.
ಇದನ್ನೂ ಓದಿ:BJP Leader Killed: ಹೆದ್ದಾರಿಯ ಬಳಿ ಬಿಜೆಪಿ ನಾಯಕಿಯ ಮೃತದೇಹ ಪತ್ತೆ.. ಕೊಲೆ ಮಾಡಿ ಬಿಸಾಡಿರುವ ಶಂಕೆ