ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ವ್ಯಾಮೋಹಕ್ಕೆ ಬಿದ್ದು ಅಣ್ಣನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ತಮ್ಮನನ್ನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಮೀಜಾನ್ ಎಂಬುವರು ಜುಲೈ 4ರಂದು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ತಮ್ಮನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮೊಹಮ್ಮದ್ ಪರ್ವೀನ್ (22) ಎಂಬುವನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಸೋಮೇಶ್ವರ ನಗರದಲ್ಲಿ ದೂರುದಾರ ಮಿಜಾನ್ ವಾಸವಾಗಿದ್ದ. ಈತನೊಂದಿಗೆ ತಾಯಿ - ತಮ್ಮ ಸಹ ವಾಸವಾಗಿದ್ದರು. ಮಿಜಾನ್ ಲಿಫ್ಟ್ ಇನ್ಸ್ಟಾಲೇಷನ್ ಕೆಲಸ ಮಾಡಿಕೊಂಡಿದ್ದರೆ, ಆರೋಪಿ ಪರ್ವೀನ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ. ಅವಿವಾಹಿತನಾಗಿದ್ದ ಪರ್ವೀನ್ ಆನ್ ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ. ಬೆಟ್ಟಿಂಗ್ನಲ್ಲಿ ಹಣ ಹೂಡಿ ಕಳೆದುಕೊಂಡಿದ್ದ. ಇದರಿಂದ ಬುದ್ದಿ ಕಲಿಯದ ಆರೋಪಿ ಬೆಟ್ಟಿಂಗ್ ಆಡಿಯೇ ಹೆಚ್ಚು ಹಣ ಗಳಿಸಬೇಕೆಂಬ ಹಪಾಹಪಿಗೆ ಬಿದ್ದಿದ್ದ. ಆದರೆ, ಈತನ ಬಳಿ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಯಿಸಿದ್ದ.
ಯಾರಿಗೂ ತಿಳಿಯದೇ ಕಳ್ಳತನ ಮಾಡಿದರೆ ಗೊತ್ತಾಗುವುದಿಲ್ಲ ಎಂದು ಭಾವಿಸಿ ಜುಲೈ 4 ರಂದು ತಾನು ವಾಸವಾಗಿದ್ದ ಮನೆಯಲ್ಲಿ 86 ಗ್ರಾಂ ಚಿನ್ನ-ಬೆಳ್ಳಿ ಆಭರಣ ಹಾಗೂ 45 ಸಾವಿರ ರೂ. ನಗದು ದೋಚಿದ್ದ. ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ಮಿಜಾನ್ಗೆ ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಹನುಮಂತ ಕೆ.ಭಜಂತ್ರಿ ನೇತೃತ್ವದ ತಂಡ ಆರೋಪಿ ಮೊಹಮ್ಮದ್ ಪರ್ವೀನ್ನನ್ನು ಕರೆಯಿಸಿ ವಿಚಾರಣೆಗೆ ಒಳಪಡಿಸಿದಾಗ ಅನುಮಾನಸ್ಪಾದ ರೀತಿ ವರ್ತಿಸಿ ತನಗೆ ಏನು ಗೊತ್ತಿಲ್ಲವೆಂಬಂತೆ ಹೇಳಿಕೆ ನೀಡಿದ್ದ.